ADVERTISEMENT

ಫುಟ್‌ಬಾಲ್: ಮರೆಯಲಾಗದ ಮರಡೋನಾ...

ಸಿದ್ದಯ್ಯ ಹಿರೇಮಠ
Published 26 ನವೆಂಬರ್ 2020, 1:14 IST
Last Updated 26 ನವೆಂಬರ್ 2020, 1:14 IST
ಮರಡೋನಾ ಕ್ರೀಡಾಂಗಣದ ಮುಂದಿನ ದೃಶ್ಯ
ಮರಡೋನಾ ಕ್ರೀಡಾಂಗಣದ ಮುಂದಿನ ದೃಶ್ಯ   

1990ರಲ್ಲಿ ಇಟಲಿಯಲ್ಲಿ ನಡೆದಿದ್ದ ವಿಶ್ವಕಪ್ ಫುಟ್‌ಬಾಲ್‌ ಪಂದ್ಯಾವಳಿಯಲ್ಲೂ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಫೇವರಿಟ್ ತಂಡಗಳಲ್ಲಿ ಒಂದಾಗಿತ್ತು.

ಆದರೆ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯಾರಿಗೂ ಗೊತ್ತೇ ಇಲ್ಲದ ಕ್ಯಾಮರೂನ್ ತಂಡದ‌ ವಿರುದ್ಧ ಅರ್ಜೆಂಟೀನಾ ಸೋತಾಗ ನಾಯಕ ಡಿಯಾಗೋ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದಿತ್ತು. ಆದರೆ, ಆರಂಭಿಕ ಪಂದ್ಯದ ಸೋಲಿನಿಂದ ‌ಕಂಗೆಡದ ನಾಯಕ ಮರಡೋನಾ ಛಲ ಬಿಡದೆ ಹೋರಾಡಿ ತಂಡವನ್ನು ಫೈನಲ್ ವರೆಗೂ ಕೊಂಡೊಯ್ದಿದ್ದರು. ಅರ್ಜೆಂಟೀನಾ ತಂಡ ಫೈನಲ್ ನಲ್ಲಿ ಪಶ್ಚಿಮ ಜರ್ಮನಿಗೆ ಸೋಲುವವರೆಗಿನ ಪ್ರತಿ ಪಂದ್ಯದಲ್ಲೂ‌ ಎದುರಾಳಿ ಆಟಗಾರರ ಗುರಿ ಮರಡೋನಾ ತಡೆಯುವುದೇ ಆಗಿರುತ್ತಿತ್ತು.
ಅಷ್ಟರ ಮಟ್ಟಿಗೆ ಮರಡೋನಾ ಭಯ ಎದುರಾಳಿ ತಂಡಗಳಿಗೆ‌ ಇರುತ್ತಿತ್ತು. ಮರಡೋನಾ ಗೋಲು ಹೊಡೆದು ಸಂಭ್ರಮಿಸಿದ‌ ಕ್ಷಣಗಳಿಗಿಂತಲೂ ಅವರು ಕೆಳಗೆ‌ ಬಿದ್ದು ಗೋಳಾಡುತ್ತಿದ್ದ ದೃಶ್ಯಗಳೇ ಟಿವಿ ಪರದೆಯ ಮೇಲೆ ಹೆಚ್ಚಾಗಿ ಕಾಣುತ್ತಿದ್ದವು.

ಹದಿನಾರರ ಹರೆಯದಲ್ಲಿದ್ದಾಗ ರಾಷ್ಟ್ರೀಯ ತಂಡ ಸೇರಿಕೊಂಡಿದ್ದ ಮರಡೋನಾ, ಸ್ವದೇಶದಲ್ಲಿ 1978ರಲ್ಲಿ ನಡೆದಿದ್ದ ವಿಶ್ವಕಪ್ ತಂಡದಲ್ಲಿದ್ದರು.

ADVERTISEMENT

ಆಗಲೂ ಚಾಂಪಿಯನ್ ಆಗಿದ್ದ ಅರ್ಜೆಂಟೀನಾ ತಂಡದ ನಾಯಕ ಡೇನಿಯಲ್ ಪಸರೆಲಾ, 'ಮುಂದೊಂದು ದಿನ ಮರಡೋನಾ ನೇತೃತ್ವದಲ್ಲಿ ತಂಡ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಲಿದೆ' ಎಂಬ ಭವಿಷ್ಯ ನುಡಿದಿದ್ದರು.

ಅವರ ಭವಿಷ್ಯ ಎಂಟು ವರ್ಷಗಳಲ್ಲಿ ನಿಜವಾಯಿತು.1986ರಲ್ಲಿ ಮೆಕ್ಸಿಕೋದಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ವಿರುದ್ಧ ಮರಡೋನಾ ಹೊಡೆದಿದ್ದ ಎರಡು ಗೋಲುಗಳ ನೆರವಿನಿಂದಲೇ ಅರ್ಜೆಂಟೀನಾ ಪಂದ್ಯ ಗೆದ್ದಿತ್ತು. ಆ ಪೈಕಿ ಒಂದು ಗೋಲು ಹೊಡೆಯುವಾಗ ಚೆಂಡು ಮರಡೋನಾ ಕೈಗೆ ಬಡಿದಿತ್ತು. ಆದರೂ ರೆಫರಿಗಳು ಗೋಲನ್ನು ನೀಡಿದ್ದರು. ಮುಂದೆ ಆ ಕೈ 'ದೇವರ ಕೈ‌' ಎಂದೇ ಹೆಸರುವಾಸಿಯಾಯಿತು.

ಫೈನಲ್ ಪಂದ್ಯದಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಗೆದ್ದು ಕಪ್ ಎತ್ತಿ ಹಿಡಿದಿದ್ದ 26ರ ಹರೆಯದ ಹುಡುಗ ಡಿಯಾಗೋ ಮರಡೋನಾ ಫುಟ್‌ಬಾಲ್‌ ಪ್ರಿಯರ ಅಚ್ಚುಮೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದರು

1994ರಲ್ಲಿ ಅಮೆರಿಕದಲ್ಲಿ ನಡೆದಿದ್ದ ತಮ್ಮ ಕೊನೆಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಮಾದಕ ವಸ್ತು ಸೇವಿಸಿ ಭಾಗವಹಿಸಿರುವ ಆರೋಪ ಸಾಬೀತಾಗಿ ಮರಡೋನಾ ಟೂರ್ನಿಯ ಮಧ್ಯ ಭಾಗದಲ್ಲೇ ಹೊರನಡೆದರು. ಎದುರಾಳಿ ಆಟಗಾರರನ್ನು ಭೇದಿಸಿಕೊಂಡು ಮುನ್ನುಗ್ಗುತ್ತಿದ್ದ ಡಿಯಾಗೋ ಸ್ವಾರ್ಥಿಯಾಗಿರದೆ, ಸಹ ಆಟಗಾರರಿಗೆ ಚೆಂಡನ್ನು ಪಾಸ್ ಮಾಡುತ್ತಿದ್ದ ವೈಖರಿ ಅದ್ಭುತ‌. ಅವರ ಕಾಲ್ಚಳಕವೇ ಅಂಥದ್ದು.

ವಿವಾದಗಳಿಂದಲೂ‌ ಕುಖ್ಯಾತರಾಗಿದ್ದ ಮರಡೋನಾ ಜಗಳ, ಮಾದಕ ವಸ್ತುವಿನ ‌ನಶೆ, ದುಶ್ಚಟಗಳಿಂದಾಗಿ ಸುದ್ದಿಯಾದರೂ ಅವರ ಆಗಾಧ ಪ್ರತಿಭೆ, ಸಾಟಿಯಿಲ್ಲದ ಆಟದಿಂದಾಗಿ ಅಭಿಮಾನಿಗಳ ಆರಾಧ್ಯ‌ದೈವವಾದರು.

ದುಶ್ವಟದಿಂದಾಗಿ ಹಲವು ಬಾರಿ ಸಾವಿನ ದವಡೆಗೆ ಜಾರಿ ಮರಳಿ ಬಂದಿದ್ದ ಮರಡೋನಾ,‌ ಕೆಲವು ದಿನಗಳ‌ ಹಿಂದೆ‌‌ ಶಸ್ತ್ರ ಚಿಕಿತ್ಸೆಗೆ ಒಳಗಾದಾಗ 'ಮತ್ತೆ ಆರೋಗ್ಯವಾಗಲಿದ್ದಾರೆ' ಎಂದೇ ಅಭಿಮಾನಿಗಳು ಭಾವಿಸಿದ್ದರು. ಉತ್ತಮ ಆರೋಗ್ಯಕ್ಕೆ ಹಾರೈಸಿದ್ದರು. ಆದರೆ, ಪರಿಣಮಿಸಿರುವ‌ 2020 ಎಂಬ ಕರಾಳ ವರ್ಷ ಮತ್ತೊಂದು ಆಪ್ತ ಜೀವವನ್ನು ಹೊತ್ತೊಯ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.