ADVERTISEMENT

ಬಿಎಫ್‌ಸಿ, ಒಡಿಶಾ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 22:01 IST
Last Updated 30 ಮಾರ್ಚ್ 2024, 22:01 IST
<div class="paragraphs"><p>ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಎಸ್‌ಎಲ್‌ ಪಂದ್ಯದಲ್ಲಿ ಬಿಎಫ್‌ಸಿಯ ಸುನಿಲ್ ಚೆಟ್ರಿ (ಮಧ್ಯದಲ್ಲಿ) ಜೊತೆ ಒಡಿಶಾ ಎಫ್‌ಸಿಯ ಲಾಲ್ರಿನ್‌ಝುವಾಲಾ (ಎಡ) ಮತ್ತು ರಾಯ್‌ ಕೃಷ್ಣ (ಬಲಗಡೆ) ಅವರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸಿದರು. ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್</p><p><br></p></div>

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಎಸ್‌ಎಲ್‌ ಪಂದ್ಯದಲ್ಲಿ ಬಿಎಫ್‌ಸಿಯ ಸುನಿಲ್ ಚೆಟ್ರಿ (ಮಧ್ಯದಲ್ಲಿ) ಜೊತೆ ಒಡಿಶಾ ಎಫ್‌ಸಿಯ ಲಾಲ್ರಿನ್‌ಝುವಾಲಾ (ಎಡ) ಮತ್ತು ರಾಯ್‌ ಕೃಷ್ಣ (ಬಲಗಡೆ) ಅವರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸಿದರು. ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್


   

ಬೆಂಗಳೂರು: ಬೆಂಗಳೂರು ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ನಡುವೆ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್ ಸೂಪರ್‌ ಲೀಗ್ ಪಂದ್ಯ ಗೋಲಿಲ್ಲದೇ ‘ಡ್ರಾ’ ಆಯಿತು. ಲೀಗ್‌ ಅಗ್ರಸ್ಥಾನಕ್ಕೇರುವ ಒಡಿಶಾ ಎಫ್‌ಸಿ ತಂಡದ ಕನಸಿಗೆ ಈ ಫಲಿತಾಂಶದಿಂದ ಹಿನ್ನಡೆಯಾಗಿದೆ.

ADVERTISEMENT

ಒಂದೆಡೆ ಒಡಿಶಾ ನಿರಾಸೆ ಅನುಭವಿಸಿದರೆ, ಇನ್ನೊಂದೆಡೆ ಆತಿಥೇಯ ಬೆಂಗಳೂರು 20 ಪಂದ್ಯಗಳಿಂದ 22 ಪಾಯಿಂಟ್ಸ್‌ ಕಲೆಹಾಕಿದ್ದು ಆರನೇ ಸ್ಥಾನಕ್ಕೇರಿದೆ. ಇನ್ನೂ ಎರಡು ಪಂದ್ಯಗಳು ಆಡಲು ಉಳಿದಿದ್ದರೂ,  ಜೆರಾಲ್ಡ್‌ ಜಾರ್ಗೊಝಾ ಪಡೆಯ ಪ್ಲೇ ಆಫ್ ಅವಕಾಶ ಕ್ಷೀಣವಾಗಿದೆ.

ಒಡಿಶಾ ತಂಡ ಈ ಮೊದಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದರೂ, ಅಗ್ರಸ್ಥಾನಕ್ಕೇರಿ ಲೀಗ್ ಶೀಲ್ಡ್ ಪಡೆಯುವ ಹಾದಿಯಲ್ಲಿ ಎಡವಿದಂತಾಗಿದೆ. ಸೆರ್ಗಿಯೊ ಲೊಬೆರಾ ತರಬೇತಿಯ ತಂಡ 19 ಪಂದ್ಯಗಳಿಂದ 36 ಪಾಯಿಂಟ್ಸ್ ಸಂಗ್ರಹಿಸಿದೆ.‌

ಅಗ್ರಸ್ಥಾನದಲ್ಲಿರುವ ಮುಂಬೈ ಇಷ್ಟೇ ಪಂದ್ಯಗಳಿಂದ 41 ಪಾಯಿಂಟ್ಸ್ ಕಲೆಹಾಕಿದೆ.

ಜಾರ್ಗೋಝಾ ಈ ಪಂದ್ಯಕ್ಕೆ ಶಿವಶಕ್ತಿ ನಾರಾಯಣನ್ ಮತ್ತು ಶಂಕರ್‌ ಸಂಪಿಂಗಿರಾಜ್ ಅವರಿಗೆ 11ರಲ್ಲಿ ಅವಕಾಶ ಕಲ್ಪಿಸಿದರು.

ಇದರಿಂದ ಸುನಿಲ್ ಚೆಟ್ರಿಗೆ ಅವಕಾಶವಾಗಲಿಲ್ಲ. ಬ್ಲೂಸ್‌ ಗೋಲ್‌ಕೀಪರ್ ಗುರುಪ್ರೀತ್ ಸಂಧು ನಾಯಕತ್ವ ವಹಿಸಿದರು. ಪಂದ್ಯದಲ್ಲಿ ಗುರುಪ್ರೀತ್, ಒಡಿಶಾ ತಂಡದ ಕೆಲವು ಗೋಲು ಯತ್ನಗಳನ್ನು ಉತ್ತಮವಾಗಿ ತಡೆದರು.

ಪಂದ್ಯ ನಿರೀಕ್ಷಿಸಿದಷ್ಟು ಬಿರುಸು ಪಡೆಯಲಿಲ್ಲ. ಒಡಿಶಾ, ಆತಿಥೇಯರ ಮೇಲೆ ಒತ್ತಡ ಹೇರತೊಡಗಿತು.  ಪಂದ್ಯದ 31ನೇ ನಿಮಿಷ ಅಹ್ಮದ್ ಜಹೋವ ಪಾಸ್‌ನಲ್ಲಿ ಜೆರ್ರಿ ಲಾಲ್ರಿನ್‌ಝವಾಲಾ ಅವರು ಬಾಕ್ಸ್‌ ಒಳಗಿಂದ ನಡೆಸಿದ ಗೋಲು ಯತ್ನವನ್ನು ಗುರುಪ್ರೀತ್ ಯಶಸ್ವಿಯಾಗಿ ತಡೆದರು.

ಬೆಂಗಳೂರು ಬ್ಲೂಸ್‌ಗೂ ಅವಕಾಶ ದೊರಕಿತ್ತು. ಸ್ಪೇನ್‌ನ ಜೇವಿ ಹೆರ್ನಾಂಡಿಝ್ ಅವರ ಪಾಸ್‌ನಲ್ಲಿ ಡ್ರೋಸ್ಟ್‌ ಅವರ ಗೋಲಿನತ್ತ ಒದ್ದ ಚೆಂಡನ್ನು ರಕ್ಷಣೆ ಆಟಗಾರ, ಸೆನೆಗಲ್‌ನ ಮೊರ್ತಾಡಾ ಫಾಲ್ ಅವರು ತಡೆದರು.

ವಿರಾಮಕ್ಕೆ ಮೊದಲು ಒಡಿಶಾ ತಂಡದ ರಾಯ್ ಕೃಷ್ಣ ಅವರು ಗೋಲಿನತ್ತ ಒದ್ದ ಚೆಂಡು ಗುರುಪ್ರೀತ್ ಅವರನ್ನು ವಂಚಿಸಿ ಗೋಲಿನತ್ತ ಹೋದರೂ, ಶಂಕರ್ ಸಕಾಲದಲ್ಲಿ ತಡೆದು ಅಪಾಯ ತಪ್ಪಿಸಿದರು.

ವಿರಾಮದ ಸ್ವಲ್ಪ ಹೊತ್ತಿನ ನಂತರ ಶಿವಶಕ್ತಿ ಬದಲು ಚೆಟ್ರಿ ಆಟಕ್ಕಿಳಿದರು. ಚೆಟ್ರಿ ಮತ್ತು ಜೇವಿ ಜೋಡಿ ಕೆಲಮಟ್ಟಿಗೆ ಒಡಿಶಾ ತಂಡಕ್ಕೆ ಸವಾಲೊಡ್ಡಿತು.

ಜೇವಿ ಅವರ ಮತ್ತೊಂದು ಗೋಲು ಯತ್ನಕ್ಕೆ ಅಮರಿಂದರ್ ಅಡ್ಡಿಯಾದರು.

ಬ್ಲೂಸ್ ತಂಡ ಮುಂದಿನ ಪಂದ್ಯವನ್ನು ಕೋಲ್ಕತ್ತದಲ್ಲಿ ಏಪ್ರಿಲ್ 7ರಂದು ಈಸ್ಟ್‌ ಬೆಂಗಾಲ್ ವಿರುದ್ಧ ಆಡಲಿದೆ. ಒಡಿಶಾ ಎಫ್‌ಸಿ ತನ್ನ ಮುಂದಿನ ಪಂದ್ಯವನ್ನು ತವರು ಭುವನೇಶ್ವರದಲ್ಲಿ ಏಪ್ರಿಲ್ 2ರಂದು ಪಂಜಾಬ್‌ ಎಫ್‌ಸಿ ವಿರುದ್ಧ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.