ADVERTISEMENT

ಕೃಷ್ಣನ ಕಾಲ್ಚಳಕ ಎ.ಟಿ.ಕೆ ಪುಳಕ

ವಿಕ್ರಂ ಕಾಂತಿಕೆರೆ
Published 22 ಡಿಸೆಂಬರ್ 2019, 19:45 IST
Last Updated 22 ಡಿಸೆಂಬರ್ 2019, 19:45 IST
ರಾಯ್ ಕೃಷ್ಣ
ರಾಯ್ ಕೃಷ್ಣ   

ನವೆಂಬರ್ 30ರಂದು ಕೋಲ್ಕತ್ತದ ಯುವಭಾರತಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯ. ಮುಂಬೈ ಸಿಟಿ ಎಫ್‌ಸಿ ಮತ್ತು ಆತಿಥೇಯ ಕೋಲ್ಕತ್ತ ನಡುವಿನ ಪಂದ್ಯದ ಇಂಜುರಿ ಅವಧಿ ನಾಟಕೀಯ ತಿರುವುಗಳಿಗೆ ಸಾಕ್ಷಿಯಾಯಿತು. 1–1ರಲ್ಲಿ ಸಮ ಆಗಿದ್ದ ಪಂದ್ಯವು ಓಂಗೊ ಗಳಿಸಿದ ಗೋಲಿನ ಮೂಲಕ ಮುಂಬೈ ಕಡೆಗೆ ವಾಲಿತ್ತು. ಆದರೆ ಮರುಕ್ಷಣದಲ್ಲಿ ರಾಯ್ ಕೃಷ್ಣ ಮಾಡಿದ ಮ್ಯಾಜಿಕ್‌ನಿಂದಾಗಿ ಪಂದ್ಯ 2–2ರಲ್ಲಿ ಡ್ರಾ ಆಯಿತು.

ಮತ್ತೊಂದು ಪಂದ್ಯ... ಡಿಸೆಂಬರ್ ಏಳರಂದು ಗುವಾಹಟಿಯಲ್ಲಿ ನಡೆದದ್ದು. ಎದುರಾಳಿ ನಾರ್ತ್ ಈಸ್ಟ್ ಯುನೈಟೆಡ್. 11ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಗಳಿಸಿದ ಗೋಲಿನ ಮೂಲಕ ಎಟಿಕೆ ಮುನ್ನಡೆ ಗಳಿಸಿತ್ತು. 35 ಮತ್ತು 93ನೇ ನಿಮಿಷಗಳಲ್ಲಿ ರಾಯ್ ಕೃಷ್ಣ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3–0ಗೆ ಏರಿಸಿದರು. ಇವೆರಡೂ ಐಎಸ್‌ಎಲ್‌ನಲ್ಲಿ ಮೂಡಿದ ಮೋಹಕ ಗೋಲುಗಳ ಸಾಲಿಗೆ ಸೇರಿವೆ.

35ನೇ ನಿಮಿಷದಲ್ಲಿ ಎದುರಾಳಿ ಡಿಫೆಂಡರ್‌ಗಳ ನಡುವಿನಿಂದ ಓಡುತ್ತ ಮುನ್ನುಗ್ಗಿ ಚೆಂಡನ್ನು ಗುರಿ ಮುಟ್ಟಿಸಿದ್ದರು. ಕೊನೆಯ ಕ್ಷಣದಲ್ಲಿ ಎದುರಾಳಿ ಆಟಗಾರರನ್ನು ವಂಚಿಸಿದ ನೋಟವಂತೂ ರಮಣೀಯ. 93ನೇ ನಿಮಿಷದಲ್ಲಿ ಅವರಿಗೆ ಚೆಂಡು ಸುಲಭವಾಗಿ ಸಿಕ್ಕಿತ್ತು. ಆದರೆ ಕೊನೆಯ ಹಂತದಲ್ಲಿ ಗೋಲ್‌ಕೀಪರ್ ಮುನ್ನುಗ್ಗಿ ಬಂದು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ರಾಯ್ ತಮ್ಮ ಲಯವನ್ನು ಬದಲಿಸಿ ಚೆಂಡನ್ನು ನಿಯಂತ್ರಿಸಿದರು. ನಿಧಾನಕ್ಕೆ ಲಾಫ್ಟ್ ಮಾಡಿದರು. ಚೆಂಡು ಗೋಲ್‌ಕೀಪರ್‌ನ ತಲೆಮೇಲಿಂದ ಸಾಗಿ
ಗುರಿ ಸೇರಿತು.

ADVERTISEMENT

ರಾಯ್ ಕೃಷ್ಣ ಅವರಿಗೆ ಐಎಸ್‌ಎಲ್‌ನಲ್ಲಿ ಇದು ಮೊದಲ ವರ್ಷ. ಅವರ ಪೂರ್ವಜರು ಕೋಲ್ಕತ್ತ ಮೂಲದವರು. ಶತಮಾನದ ಹಿಂದೆ ಫಿಜಿಗೆ ತೆರಳಿದವರು. ಮೊದಲು ಫಿಜಿ ತಂಡದಲ್ಲಿ ಮತ್ತು ಈಗ ನ್ಯೂಜಿಲೆಂಡ್‌ ತಂಡದಲ್ಲಿ ಆಡುತ್ತಿರುವ ರಾಯ್ ಐಎಸ್‌ಎಲ್‌ನಲ್ಲಿ ಎಟಿಕೆ ತಂಡ ಸೇರುವುದರೊಂದಿಗೆ ‘ತವರಿನ’ ಅಂಗಳದಲ್ಲಿ ಆಡಿದ ಆನಂದ ಅನುಭವಿಸುತ್ತಿದ್ದಾರೆ.

ಫಿಜಿಯ ಮಕ್ವಾಟದ ಲಾಬಾಸ, ರಾಯ್ ಕೃಷ್ಣ ಜನಿಸಿದ ಊರು. ಹುಟ್ಟಿದ್ದು 1987ರಲ್ಲಿ. ಯೂಥ್ ವಿಭಾಗದಲ್ಲಿ ಆಡುತ್ತಿದ್ದಾಗಲೇ ನ್ಯೂಜಿಲೆಂಡ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಲಭಿಸಿತು. ಫಿಜಿಯ ಲಾಬಾಸ ಎಫ್‌ಸಿ ಪರ ಅಂಗಣಕ್ಕೆ ಇಳಿದು ಗಮನ ಸೆಳೆದರು. ರಾಯ್ ಅವರ ಸೀನಿಯರ್ ವೃತ್ತಿ ಜೀವನ ಶುರುವಾದದ್ದು 2008ರಲ್ಲಿ. ವೇಟ್ಕೆರೆ ಯುನೈಟೆಡ್ ತಂಡದಲ್ಲಿ ಐದು ವರ್ಷ ಆಡಿದ ಅವರು 75 ಪಂದ್ಯಗಳಿಂದ ಒಟ್ಟು 55 ಗೋಲುಗಳನ್ನು ದಾಖಲಿಸಿದರು. ನಂತರ ಒಂದು ವರ್ಷ ಆಕ್ಲೆಂಡ್ ಸಿಟಿಗಾಗಿ ಆಡಿದರು.
2012-13ನೇ ಸಾಲಿನ ನ್ಯೂಜಿಲೆಂಡ್ ಎಫ್‌ಸಿ ಗೋಲ್ಡನ್ ಬೂಟ್ ಪ್ರಶಸ್ತಿ ಅವರ ಪಾಲಾಯಿತು. 2014ರಿಂದ ಈ ವರ್ಷದ ಆರಂಭದ ವರೆಗೆ ವೆಲಿಂಗ್ಟನ್ ಫೀನಿಕ್ಸ್‌ನಲ್ಲಿ ಆಡಿದ ರಾಯ್ 122 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದರು. ಅವರ ಕಾಲ್ಚಳಕದಲ್ಲಿ ಅರಳಿದ್ದು 51 ಗೋಲುಗಳು. 2018ರಲ್ಲಿ ವೆಲಿಂಗ್ಟನ್ ಫೀನಿಕ್ಸ್ ವರ್ಷದ ಆಟಗಾರ ಎನಿಸಿದರು.

ರಾಷ್ಟ್ರೀಯ ತಂಡಕ್ಕಾಗಿ 29 ಗೋಲು

20 ಮತ್ತು 23 ವರ್ಷದೊಳಗಿನವರ ಫಿಜಿ ತಂಡದಲ್ಲಿ ಕ್ರಮವಾಗಿ ಆರು ಮತ್ತು ಎಂಟು ಪಂದ್ಯಗಳನ್ನಷ್ಟೇ ಆಡಿದ್ದರೂ ಗಮನ ಸೆಳೆದಿದ್ದರು. ನಂತರ ಫಿಜಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಲಭಿಸಿತು. ಕಳೆದ ಬಾರಿಯ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಏಳು ಪಂದ್ಯಗಳನ್ನು ಆಡಿ ನಾಲ್ಕು ಗೋಲುಗಳನ್ನು ಗಳಿಸಿದರು. ಫಿಜಿಗಾಗಿ ಈ ವರೆಗೆ 40 ಪಂದ್ಯಗಳನ್ನು ಆಡಿದ್ದಾರೆ; 29 ಬಾರಿ ಚೆಂಡನ್ನು ಗುರಿ ಮುಟ್ಟಿಸಿದ್ದಾರೆ.

2008 ಮತ್ತು 2016ರ ಒಎಫ್‌ಸಿ ನ್ಯಾಷನಲ್ ಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದ ರಾಯ್ 2018ರಲ್ಲಿ ಅದೇ ರಾಷ್ಟ್ರದ ಪೌರತ್ವವನ್ನು ಪಡೆದುಕೊಂಡರು. ಈಗ ಅವರು ನ್ಯೂಜಿಲೆಂಡ್ ಪ್ರಜೆ. ಮದುವೆ, ಅವರ ವರ್ಣರಂಜಿತ ಜೀವನದ ಮತ್ತೊಂದು ಮಗ್ಗುಲು. ಫಿಜಿ ಪ್ರಜೆಯಾಗಿ ಜನಿಸಿ ನ್ಯೂಜಿಲೆಂಡ್ ನಾಗರಿಕನಾದ ಮೇಲೆ ಇಂಡೊ-ಫಿಜಿಯನ್, ನಜಿಯಾ ಅಲಿಯನ್ನು ವರಿಸಿದರು.

ಬದುಕು ಕಟ್ಟಿಕೊಳ್ಳಲು ತೆರಳಿದವರು...

ರಾಯ್ ಕೃಷ್ಣ ಅವರ ಪೂರ್ವಜರು ಕೋಲ್ಕತ್ತದವರು. 140 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಫಿಜಿ ಕಡೆಗೆ ಪ್ರಯಾಣ ಬೆಳೆಸಿದವರು. ಭಾರತದ ಫುಟ್‌ಬಾಲ್ ಬಗ್ಗೆ ಅತ್ಯಂತ ಗೌರವ ಹೊಂದಿರುವ ರಾಯ್ ಕೃಷ್ಣ ‘ಇಲ್ಲಿನವರು ತುಂಬ ಚುರುಕಾಗಿ ಆಡುತ್ತಾರೆ’ ಎಂದು ಅಭಿಪ್ರಾಯಪಡುತ್ತಾರೆ.

‘ಪೂರ್ವಿಕರು ಎಲ್ಲಿಂದ ಹೋದರೋ ಅಲ್ಲಿಗೇ ಬಂದು ಆಡಲು ಅವಕಾಶ ಲಭಿಸಿರುವುದು ತುಂಬ ಖುಷಿಯ ವಿಷಯ. ಕಳೆದ ವರ್ಷ ದುರ್ಗಾ ಪೂಜೆಯ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದೆ. ಆ ಸಂದರ್ಭಗಳಲ್ಲಿ ‘ಮಂಟಪ’ಗಳಿಗೆ ಭೇಟಿ ನೀಡಿದಾಗ ತವರಿನಲ್ಲಿ ಹಬ್ಬದಲ್ಲಿ ಪಾಲ್ಗೊಂಡ ಅನುಭವವಾಯಿತು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.