ADVERTISEMENT

ಫುಟ್‌ಬಾಲ್ ಪ್ರಿಯ ’ಚಿನ್ನದ ಮಕ್ಕಳ‘ ಪರಿಸರ ಪ್ರೀತಿ

ವಿಕ್ರಂ ಕಾಂತಿಕೆರೆ
Published 11 ಸೆಪ್ಟೆಂಬರ್ 2020, 19:30 IST
Last Updated 11 ಸೆಪ್ಟೆಂಬರ್ 2020, 19:30 IST
ಆಯೋಜಕರೊಂದಿಗೆ ಸಸಿ ನೆಟ್ಟ ಮಕ್ಕಳು
ಆಯೋಜಕರೊಂದಿಗೆ ಸಸಿ ನೆಟ್ಟ ಮಕ್ಕಳು   
""

ಈ ಬಾಲಕ–ಬಾಲಕಿಯರು ಆರರಿಂದ 13 ವರ್ಷದೊಳಗಿನವರು. ಅವರೆಲ್ಲರೂ ಪಶ್ಚಿಮ ಬಂಗಾಳದ ಇಸ್ಲಾಂಪುರದಲ್ಲಿ ನಡೆದಿದ್ದ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಂಡವರು. ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ’ಗೋಲ್ಡನ್ ಬೇಬಿ ಲೀಗ್‌‘ನ ಇಸ್ಲಾಂಪುರ ಆವೃತ್ತಿಯಲ್ಲಿ ಆಡಿದ ಅವರು ಆಟದ ಜೊತೆಯಲ್ಲೇ ಪರಿಸರ ಪ್ರೀತಿ ಮೆರೆದಿದ್ದರು. ಗಿಡಗಳನ್ನು ನೆಟ್ಟು ಹಸಿರು ಉಳಿಸುವ ಕಾಯಕದಲ್ಲಿ ಭಾಗಿಯಾದ್ದರು.

’ಒಂದಾನೊಂದು ಕಾಲದಲ್ಲಿ‘ ತುಂಬಿ ಹರಿಯುತ್ತಿದ್ದ, ಹಸಿರು ಕಂಗೊಳಿಸುತ್ತಿದ್ದ ಭೈರಬ್ ನದಿ ಈಗ ಬತ್ತಿದೆ. ದಂಡೆಗಳು ಬರಡಾಗಿವೆ. ನದಿತಟದಲ್ಲಿ ಹಸಿರು ಕಂಗೊಳಿಸುವಂತೆ ಮಾಡಲು ಮುಂದಾದ ಲೀಗ್‌ನ ಸ್ಥಳೀಯ ಆಯೋಜಕರು ಎಳೆಯ ಫುಟ್‌ಬಾಲ್ ಆಟಗಾರರನ್ನು ’ಕಣಕ್ಕೆ‘ ಇಳಿಸಿದರು. ತಾವು ಪ್ರತಿನಿಧಿಸುವ ತಂಡಗಳ ಜೆರ್ಸಿ ತೊಟ್ಟುಕೊಂಡು ಬಂದ ಮಕ್ಕಳು ನದಿ ದಂಡೆಯಲ್ಲೂ ಸಮೀಪದಲ್ಲೇ ಇರುವ ರಸ್ತೆಯ ಬದಿಯಲ್ಲೂ ಸಸಿಗಳನ್ನು ನೆಟ್ಟು ಸಂಭ್ರಮಿಸಿದರು.

ಪಂದ್ಯದ ಶ್ರೇಷ್ಠ ಆಟಗಾರನಿಗೆ ಸಸಿ ಪ್ರಶಸ್ತಿ

ADVERTISEMENT

ಇಸ್ಲಾಂಪುರ ಪರಿಸರದ ಸದ್ಯದ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಸಲುವಾಗಿ ನದಿ ಮತ್ತು ಮಣ್ಣು ತಜ್ಞರನ್ನು ಕರೆಸಿ ಈ ಆಟಗಾರರಿಗಾಗಿ ಕಾರ್ಯಾಗಾರಗಳನ್ನೂ ಸಂಘಟಕರು ಆಯೋಜಿಸಿದ್ದಾರೆ. ಕಳೆದ ಬಾರಿಯ ಗೋಲ್ಡನ್ ಬೇಬಿ ಲೀಗ್‌ನಲ್ಲಿ ಒಟ್ಟು 478 ಮಕ್ಕಳು ಪಾಲ್ಗೊಂಡಿದ್ದರು. ಆಗಿನ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದವರ ಹೆಸರಿನಲ್ಲಿ ಒಂದೊಂದು ಸಸಿಯನ್ನು ನೆಡಲಾಯಿತು.

’ಇದು ಇಲ್ಲಿಯ ಜನರ ಜೀವನದಿ. ನಾನು ಸಣ್ಣವನಿದ್ದಾಗ ನದಿ ಉಕ್ಕಿ ಹರಿದಿದ್ದನ್ನು ನೋಡಿದ್ದೇನೆ. ಆದರೆ ಈಗ ನೀರು ಕಡಿಮೆಯಾಗಿದೆ, ಹಸಿರೂ ನಾಶವಾಗಿದೆ. ಹೀಗಾಗಿ ಇಲ್ಲಿ ಪರಿಸರದ ಬಗ್ಗೆ ಕಾಳಜಿ ಬೆಳೆಸಲೇಬೇಕು ಎಂದೆನಿಸಿತು. ಆದ್ದರಿಂದ ಈ ಕಾರ್ಯಕ್ರಮ ಆಯೋಜಿಸಿದೆವು‘ ಎಂದು ಲೀಗ್ ವ್ಯವಸ್ಥಾಪಕ ಅಮಿನುಲ್ ಇಸ್ಲಾಂ ತಿಳಿಸಿದರು.

ಪಂದ್ಯಶ್ರೇಷ್ಠ ಆಟಗಾರನಿಗೆ ಸಸಿ ನೀಡಿದ ಸಂದರ್ಭ

ಶಾಲಾ ಮಕ್ಕಳಿಗೆ ಮಾತ್ರ ಲೀಗ್‌ನಲ್ಲಿ ಆಡಲು ಅವಕಾಶ ಇದೆ. ಹೀಗಾಗಿ ಫುಟ್‌ಬಾಲ್ ಆಡಲು ಬಯಸುವ, ಆದರೆ ಶಾಲೆಯಿಂದ ಹೊರಗೆ ಉಳಿದಿರುವ ನೂರಾರು ಮಕ್ಕಳು ಲೀಗ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶಾಲೆಗೆ ಮರುಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದರೊಂದಿಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಕ್ಕೆ ಮತ್ತು ಶಾಲೆಗೆ ಹೋಗಲು ಅವರನ್ನು ಪ್ರೇರೇಪಿಸಿದ್ದಕ್ಕೆ ಪಾಲಕರೂ ಖುಷಿಯಾಗಿದ್ದಾರೆ; ಅವರಲ್ಲಿ ಭರವಸೆ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.