ADVERTISEMENT

ಹಲ್ದರ್ ಗಾಯ ಭಾರತಕ್ಕೆ ಮುಳುವಾಯ್ತು: ಸ್ಟಿಮ್ಯಾಕ್

ಪಿಟಿಐ
Published 20 ನವೆಂಬರ್ 2019, 20:15 IST
Last Updated 20 ನವೆಂಬರ್ 2019, 20:15 IST
ಇಗೊರ್ ಸ್ಟಿಮ್ಯಾಕ್
ಇಗೊರ್ ಸ್ಟಿಮ್ಯಾಕ್   

ಮಸ್ಕತ್‌: ಗೋಲು ಗಳಿಸಲು ಸಾಧ್ಯವಾಗದೇ ಇದ್ದದ್ದು ಮತ್ತು ಮಿಡ್‌ಫೀಲ್ಡರ್‌ ಪ್ರಣಯ್‌ ಹಲ್ದರ್ ಅವರು ಗಾಯಗೊಂಡದ್ದು ಒಮನ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಮುಳುವಾಯಿತು ಎಂದು ಭಾರತ ಫುಟ್‌ಬಾಲ್ ತಂಡದ ಕೋಚ್ ಇಗೊರ್ ಸ್ಟಿಮ್ಯಾಕ್ ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿ ನಡೆದಿದ್ದ ವಿಶ್ವಕಪ್ ಅರ್ಹತಾ ಸುತ್ತಿನ 5ನೇ ಪಂದ್ಯದಲ್ಲಿ ಭಾರತ 0–1 ಅಂತರದಲ್ಲಿ ಒಮನ್‌ಗೆ ಮಣಿದಿತ್ತು. ಈ ಮೂಲಕ ತಂಡದ ವಿಶ್ವಕಪ್ ಅರ್ಹತೆಯ ಕನಸು ಕಮರಿತ್ತು. ಪಂದ್ಯದ 27ನೇ ನಿಮಿಷದಲ್ಲಿ ಪ್ರಣಯ್ ಹಲ್ದರ್ ಭುಜದ ನೋವಿನಿಂದ ಮರಳಿದ್ದರು. ಅವರ ಬದಲಿಗೆ ವಿನೀತ್ ರಾಯ್ ಅವರನ್ನು ಕಣಕ್ಕೆ ಇಳಿಸಲಾಗಿತ್ತು. 36ನೇ ನಿಮಿಷದಲ್ಲಿ ಆದಿಲ್ ಖಾನ್ ಬದಲಿಗೆ ಅನಾಸ್ ಎಡತೋಡಿಕಾ ಅವರನ್ನು ಆಡಿಸಲಾಗಿತ್ತು.

‘ಮೊದಲಾರ್ಧದಲ್ಲೇ ಇಬ್ಬರು ಬದಲಿ ಆಟಗಾರರನ್ನು ಕಣಕ್ಕೆ ಇಳಿಸುವಂಥ ಪರಿಸ್ಥಿತಿ ಎದುರಾದರೆ ಪೂರ್ವನಿರ್ಧರಿತ ಯೋಜನೆಗಳಂತೆ ಮುಂದೆ ಸಾಗುವುದು ಕಷ್ಟ. ಇದರಿಂದ ತಂಡಕ್ಕೆ ಹಿನ್ನಡೆಯಾಗುವುದು ಸಹಜ’ ಎಂದು ಸ್ಟಿಮ್ಯಾಕ್ ಹೇಳಿದರು.

ADVERTISEMENT

ಮಂಗಳವಾರದ ಸೋಲಿನೊಂದಿಗೆ ಭಾರತ ’ಇ’ ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಉಳಿಯಿತು. 5 ಪಂದ್ಯಗಳಲ್ಲಿ ಸುನಿಲ್ ಚೆಟ್ರಿ ಬಳಗ ಕಲೆ ಹಾಕಿರುವ ಪಾಯಿಂಟ್‌ಗಳು 3 ಮಾತ್ರ. ತಂಡದ ಮುಂದಿನ ಪಂದ್ಯ 2020ರ ಮಾರ್ಚ್‌ 26ರಂದು ಭುವನೇಶ್ವರದಲ್ಲಿ ನಡೆಯಲಿದೆ. ಆ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್‌ ಕತಾರ್ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.