ADVERTISEMENT

ಎಎಫ್‌ಸಿ: ಸಿಂಗಪುರ ವಿರುದ್ಧ ಪಂದ್ಯ ಡ್ರಾ

ಎಎಫ್‌ಸಿ ಅರ್ಹತಾ ಪಂದ್ಯ: ಕೊನೆಗಳಿಗೆಯ ಗೋಲು, ಭಾರತಕ್ಕೆ ತಪ್ಪಿದ ಸೋಲು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 15:51 IST
Last Updated 9 ಅಕ್ಟೋಬರ್ 2025, 15:51 IST
<div class="paragraphs"><p>ಎಎಫ್‌ಸಿ ಕಪ್‌ ಟೂರ್ನಿ</p></div>

ಎಎಫ್‌ಸಿ ಕಪ್‌ ಟೂರ್ನಿ

   

ಸಿಂಗಪುರ: ಹತ್ತು ಮಂದಿ ಆಟಗಾರರಿಗೆ ಸೀಮಿತಗೊಂಡ ಭಾರತ ತಂಡವು ಪಂದ್ಯ ಮುಗಿಯುವ ಹಂತದಲ್ಲಿದ್ದಾಗ ಸಿಂಗಪುರ ಆಟಗಾರನೊಬ್ಬನ ರಕ್ಷಣಾ ಲೋಪದಿಂದ ಗೋಲು ಗಳಿಸಿ ಸೋಲಿನಿಂದ ಬಚಾವಾಯಿತು. ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಗುರುವಾರ ಸಿಂಗಪುರ ಎದುರು 1–1 ಡ್ರಾ ಮಾಡಿಕೊಳ್ಳುವಲ್ಲಿ ಈ ಗೋಲು ಆಸರೆಯಾಯಿತು.

ಈ ಡ್ರಾ ಕಾರಣ, ಏಷ್ಯನ್ ಕಪ್‌ ಪ್ರಧಾನ ಟೂರ್ನಿಗೆ ಅರ್ಹತೆ ಗಳಿಸುವ ಭಾರತ ತಂಡದ ಕ್ಷೀಣ ಆಸೆ ಜೀವಂತವಾಗಿದೆ.

ADVERTISEMENT

‘ಸಿ’ ಗುಂಪಿನ ಈ ಪಂದ್ಯದ ಮೊದಲಾರ್ಧದ ಕೊನೆಯ ಕ್ಷಣದಲ್ಲಿ (‘ಸ್ಟಾಪೇಜ್‌ ಅವಧಿ’ಯ ಮೊದಲ ನಿಮಿಷ) ಇಖ್ಸಾನ್ ಫಂದಿ ಗಳಿಸಿದ ಗೋಲಿನಿಂದಾಗಿ ಸಿಂಗಪುರ ಮುನ್ನಡೆ ಗಳಿಸಿತು. ಆದರೆ 90ನೇ ನಿಮಿಷ ಸಿಂಗಪುರದ ಜೋರ್ಡನ್‌ ಎಮಾವಿವ್ ಎಸಗಿದ ಪ್ರಮಾದ ದುಬಾರಿಯಾಯಿತು. ರಹೀಮ್ ಅಲಿ ಹೊಡೆದ ಗೋಲಿನಿಂದ ಭಾರತ ನಿಟ್ಟುಸಿರುಬಿಟ್ಟಿತು.

ಆಟಗಾರರನ್ನು ಶಿಬಿರಕ್ಕೆ ಬಿಟ್ಟುಕೊಡಲು ಕ್ಲಬ್‌ಗಳಿಂದಾದ ವಿಳಂಬ, ಗೊಂದಲಗಳ ಪರಿಣಾಮ ಭಾರತ ತಂಡ ಕೇವಲ ಒಂದು ವಾರವಷ್ಟೇ ಒಟ್ಟಾಗಿ ತರಬೇತಿ ಪಡೆಯಲು ಸಾಧ್ಯವಾಗಿತ್ತು.

ಖಾಲಿದ್ ಜಮೀಲ್ ತರಬೇತಿಯ ತಂಡಕ್ಕೆ ಈ ಪಂದ್ಯದಲ್ಲಿ ವಿರಾಮದ ನಂತರ ಮತ್ತೊಂದು ಹಿನ್ನಡೆಯಾಯಿತು. ರಕ್ಷಣೆ ಆಟಗಾರ ಸಂದೇಶ್‌ ಜಿಂಗಾನ್ ಅವರು ಎರಡನೇ ‘ಹಳದಿ ಕಾರ್ಡ್‌’ ದರ್ಶನದಿಂದಾಗಿ 47ನೇ ನಿಮಿಷ ಹೊರನಡೆಯಬೇಕಾಯಿತು. ಹೀಗಾಗಿ ತಂಡ ಹತ್ತು ಆಟಗಾರರೊಂದಿಗೆ ಉಳಿದ ಆವಧಿ ಆಡಬೇಕಾಯಿತು.

ಭಾರತ ಮೂರು ಪಂದ್ಯಗಳಿಂದ ಎರಡು ಪಾಯಿಂಟ್ಸ್‌ ಗಳಿಸಿದೆ. ಈ ಮೊದಲು ಬಾಂಗ್ಲಾದೇಶ ವಿರುದ್ಧ ಗೋಲಿಲ್ಲದೇ ಡ್ರಾ ಸಾಧಿಸಿದ್ದ ಗುರ್‌ಪ್ರೀತ್ ಸಿಂಗ್ ಸಂಧು ಬಳಗವು, ಹಾಂಗ್‌ಕಾಂಗ್ ತಂಡಕ್ಕೆ 0–1 ಗೋಲಿನಿಂದ ಮಣಿದಿತ್ತು. ಹೀಗಾಗಿ 2027ರ ಪ್ರಧಾನ ಸುತ್ತಿಗೆ ತಲುಪುವ ಸವಾಲಿನ ಹಾದಿ ಕಠಿಣವಾಗಿದ್ದರೂ ಬತ್ತಿಹೋಗಿಲ್ಲ.

ಗುಂಪಿನಲ್ಲಿ ಮೊದಲ ಸ್ಥಾನ ಗಳಿಸುವ ತಂಡ ಮಾತ್ರ ಎಎಫ್‌ಸಿ ಏಷ್ಯನ್ ಕಪ್‌ ಟೂರ್ನಿಗೆ ಅರ್ಹತೆ ಪಡೆಯಲಿದೆ. 

ಗುಂಪು ಹಂತದಲ್ಲಿ ಪ್ರತಿಯೊಂದು ತಂಡವು ಆರು ಪಂದ್ಯಗಳನ್ನು ಆಡಬೇಕಾಗುತ್ತದೆ. ಸ್ವದೇಶದಲ್ಲಿ ಮತ್ತು ಎದುರಾಳಿ ತಂಡದ ದೇಶದಲ್ಲಿ ತಲಾ ಒಂದೊಂದು ಪಂದ್ಯಗಳನ್ನು ಆಡಬೇಕಾಗುತ್ತದೆ.

ಸಿಂಗಪುರ ತಂಡವು ಗುರುವಾರದ ‘ಡ್ರಾ’ ದಿಂದಾಗಿ ಒಟ್ಟು ಐದು ಪಾಯಿಂಟ್ಸ್ ಶೇಖರಿಸಿದಂತಾಗಿದೆ. ಕೊನೆಗಳಿಗೆಯಲ್ಲಿ ಭಾರತಕ್ಕೆ ಗೋಲು ಬಿಟ್ಟುಕೊಟ್ಟ ಕಾರಣ ತಂಡ ಅಮೂಲ್ಯ ಒಂದು ಪಾಯಿಂಟ್‌ ಕಳೆದುಕೊಂಡು ಕೈಕೈಹಿಸುಕಿಕೊಳ್ಳುವಂತಾಯಿತು.

ಭಾರತಕ್ಕೆ ಈ ಪಂದ್ಯದಲ್ಲಿ ಅತ್ಯುತ್ತಮ ಎನ್ನಬಹುದಾದ ಅವಕಾಶಗಳು ದೊರೆತಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಎಮಾವಿವ್‌ ಸೆಂಟರ್‌ಲೈನ್‌ನಿಂದ ದೂರದ ಬ್ಯಾಕ್‌ಪಾಸ್‌ ಕಳುಹಿಸದೇ ಹೋಗಿದ್ದಲ್ಲಿ ಸಿಂಗಪುರ ಪಂದ್ಯ ಗೆಲ್ಲುವುದರಲ್ಲಿ ಅನುಮಾನವಿರಲಿಲ್ಲ.

ಈ ಎರಡೂ ತಂಡಗಳು ಇದೇ 14ರಂದು ಮಡಗಾಂವ್‌ನಲ್ಲಿ ನಡೆಯುವ ‘ರಿಟರ್ನ್‌ ಲೆಗ್’  ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.