ADVERTISEMENT

ಭಾರತದ ವಿಶ್ವಕಪ್‌ ಅರ್ಹತೆ ಕಮರಿದ ಕನಸು

ಫುಟ್‌ಬಾಲ್‌: ಒಮನ್‌ ಎದುರು 0–1ರಿಂದ ಸೋಲು

ಪಿಟಿಐ
Published 19 ನವೆಂಬರ್ 2019, 18:59 IST
Last Updated 19 ನವೆಂಬರ್ 2019, 18:59 IST
ಭಾರತ ತಂಡದ ಬ್ರೆಂಡನ್‌ ಫರ್ನಾಂಡಿಸ್‌ (ಬಲ) ಅವರಿಂದ ಚೆಂಡನ್ನು ಕಸಿದು ಮುನ್ನುಗ್ಗಿದ ಒಮನ್‌ನ ಅಲ್‌ ಮಂದಾರ್‌ ಅಲ್‌ ಅಲ್ವಿ–ಎಎಫ್‌ಪಿ ಚಿತ್ರ
ಭಾರತ ತಂಡದ ಬ್ರೆಂಡನ್‌ ಫರ್ನಾಂಡಿಸ್‌ (ಬಲ) ಅವರಿಂದ ಚೆಂಡನ್ನು ಕಸಿದು ಮುನ್ನುಗ್ಗಿದ ಒಮನ್‌ನ ಅಲ್‌ ಮಂದಾರ್‌ ಅಲ್‌ ಅಲ್ವಿ–ಎಎಫ್‌ಪಿ ಚಿತ್ರ   

ಮಸ್ಕತ್‌: ಭಾರತ ಫುಟ್‌ಬಾಲ್‌ ತಂಡದ ವಿಶ್ವಕಪ್‌ ಅರ್ಹತೆಯ ಕನಸು ಬಹುತೇಕ ಕಮರಿತು. ಮಂಗಳವಾರ ನಡೆದ ಅರ್ಹತಾ ಪಂದ್ಯದಲ್ಲಿ ಒಮನ್‌ ತಂಡದ ಎದುರು ಚೆಟ್ರಿ ಪಡೆ 0–1ರಿಂದ ಸೋತಿತು.

ಇಲ್ಲಿನ ಖಾಬೂಸ್‌ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 33ನೇ ನಿಮಿಷದಲ್ಲಿ ಒಮನ್‌ ತಂಡದ ಮೊಹಸಿನ್‌ ಅಲ್‌ ಗಸ್ಸಾನಿಗೋಲು ದಾಖಲಿಸಿದರು. ಆ ಮೂಲಕ ಭಾರತದ ಕನಸಿಗೆ ತಣ್ಣೀರೆರೆಚಿದರು. ಅರ್ಹತಾ ಸುತ್ತಿನಲ್ಲಿ ಒಮನ್‌, ಭಾರತ ತಂಡಕ್ಕೆ ಎರಡನೇ ಬಾರಿ ಸೋಲುಣಿಸಿತು. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಚೆಟ್ರಿ ಪಡೆ ಎದುರು ಒಮನ್‌ ಗೆದ್ದಿತ್ತು.

33ನೇ ನಿಮಿಷದಲ್ಲಿ ಮೊಹಸಿನ್‌ ಜೋಹರ್‌ ಅಲ್‌ ಖಾಲ್ದಿ ಅವರು ನೀಡಿದ ಪಾಸ್‌ನಲ್ಲಿ ಗಸ್ಸಾನಿ ಅವರು ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಅವರನ್ನು ವಂಚಿಸಿ ಗೋಲು ಹೊಡೆದರು.

ADVERTISEMENT

ದ್ವಿತೀಯಾರ್ಧದಲ್ಲಿ ಭಾರತ ಉತ್ತಮ ದಾಳಿ ನಡೆಸಿತು. ‌64ನೇ ನಿಮಿಷದಲ್ಲಿ ಒಮನ್‌ ತಂಡಕ್ಕೆ ಮತ್ತೊಂದು ಗೋಲು ಗಳಿಕೆಯ ಅವಕಾಶವಿತ್ತು. ಆದರೆ ಗುರುಪ್ರೀತ್‌ ತಡೆದರು. ಭಾರತ ಉಳಿದ ಮೂರು ಪಂದ್ಯಗಳನ್ನು ಮುಂದಿನ ವರ್ಷ ಕತಾರ್‌, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನ ಎದುರು
ಆಡಲಿದೆ.

ಐದು ಪಂದ್ಯಗಳಿಂದ ಮೂರು ಪಾಯಿಂಟ್ಸ್ ಕಲೆಹಾಕಿದ ಭಾರತ ‘ಇ ’ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲೇ ಉಳಿಯಿತು. ಕತಾರ್‌ 13 ಪಾಯಿಂಟ್ಸ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಒಮನ್‌ 12 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನದಲ್ಲಿದೆ.

ಎರಡನೇ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಇನ್ನು ಕೇವಲ ಮೂರು ಪಂದ್ಯಗಳನ್ನು ಭಾರತ ಆಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.