ADVERTISEMENT

ಚೆಟ್ರಿ ಬಳಗಕ್ಕೆ ಮಾಡು–ಮಡಿ ಪಂದ್ಯ

ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ: ಒಮನ್ ವಿರುದ್ಧ ಮಹತ್ವದ ಹಣಾಹಣಿ

ಪಿಟಿಐ
Published 19 ನವೆಂಬರ್ 2019, 7:48 IST
Last Updated 19 ನವೆಂಬರ್ 2019, 7:48 IST
ಒಮನ್ ವಿರುದ್ಧ ಮಾಡು ಮಡಿ ಪಂದ್ಯದಲ್ಲಿ ಸೆಣಸಲು ಭಾರತ ತಂಡ ಸಜ್ಜಾಗಿದೆ –ಪಿಟಿಐ ಚಿತ್ರ
ಒಮನ್ ವಿರುದ್ಧ ಮಾಡು ಮಡಿ ಪಂದ್ಯದಲ್ಲಿ ಸೆಣಸಲು ಭಾರತ ತಂಡ ಸಜ್ಜಾಗಿದೆ –ಪಿಟಿಐ ಚಿತ್ರ   

ಮಸ್ಕತ್: ಸತತ 4 ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಭಾರತ ತಂಡ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಮಹತ್ವದ ಪಂದ್ಯದಲ್ಲಿ ಮಂಗಳವಾರ ಒಮನ್ ತಂಡವನ್ನು ಎದುರಿಸಲಿದೆ. ಸುಲ್ತಾನ್ ಖಬೂಸ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೂಡ ಗೆಲುವು ಗಳಿಸಲಾಗದಿದ್ದರೆ ಮುಂದಿನ ಹಂತಕ್ಕೆ ಸಾಗುವ ತಂಡದ ಕನಸು ಭಗ್ನವಾಗಲಿದೆ. ಆದ್ದರಿಂದ ಸುನಿಲ್ ಚೆಟ್ರಿ ಬಳಗಕ್ಕೆ ಇದು ಮಾಡು ಇಲ್ಲ, ಮಡಿ ಪಂದ್ಯ.

ಗುವಾಹಟಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಮೊದಲ ಸುತ್ತಿನ ‍ಪಂದ್ಯದಲ್ಲಿ ಒಮನ್‌ ಭಾರತವನ್ನು 2–1 ಗೋಲಿನಿಂದ ಮಣಿಸಿತ್ತು. ಆ ಪಂದ್ಯದ 24ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟಿದ್ದರು. ಆದರೆ ಕೊನೆಯ 10 ನಿಮಿಷಗಳಲ್ಲಿ 2 ಗೋಲುಗಳನ್ನು ಗಳಿಸಿದ ಪ್ರವಾಸಿ ತಂಡ ಭಾರತದ ಕನಸನ್ನು ಭಗ್ನಗೊಳಿಸಿತ್ತು. 82 ಮತ್ತು 90ನೇ ನಿಮಿಷಗಳಲ್ಲಿ ಅಲ್‌ ಮಂದಾರ್ ಗೋಲು ಗಳಿಸಿದ್ದರು.

ಆ ಪಂದ್ಯದ ನಂತರದ ಮೂರು ಪಂದ್ಯಗಳಲ್ಲಿ ಭಾರತ ಉತ್ತಮ ಆಟ ಆಡಿದ್ದರೂ ಜಯ ಗಳಿಸಲು ಆಗಲಿಲ್ಲ. ಆದರೆ ಒಮನ್ ಅಮೋಘ ಸಾಧನೆ ಮಾಡುತ್ತ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಕಳೆದ 14ರಂದು ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 4–1ರಿಂದ ಮಣಿಸಿರುವ ತಂಡ ಆತ್ಮವಿಶ್ವಾಸದಲ್ಲೇ ತವರಿನ ಅಂಗಣದಲ್ಲಿ ಕಣಕ್ಕೆ ಇಳಿಯಲಿದೆ.

ADVERTISEMENT

ಒಮನ್ ವಿರುದ್ಧದ ಸೋಲಿನ ನಂತರ ಏಷ್ಯಾ ಚಾಂಪಿಯನ್ ಕತಾರ್ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿ ಭಾರತ ಭರವಸೆ ಮೂಡಿಸಿತ್ತು. ಆದರೆ ತನಗಿಂತ ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ಎದುರಿನ ಪಂದ್ಯಗಳಲ್ಲಿ ಡ್ರಾ ಗಳಿಸಲಷ್ಟೇ ಸಾಧ್ಯವಾಗಿತ್ತು. ಆದ್ದರಿಂದ ಮಂಗಳವಾರದ ಪಂದ್ಯದ ವೇಳೆ ತಂಡಕ್ಕೆ ಆತಂಕ ಇರುವುದು ಸಹಜ. ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಭಾರತಕ್ಕೆ ಮುಂದಿನ ಸುತ್ತು ಪ್ರವೇಶಿಸುವುದು ಕಷ್ಟಸಾಧ್ಯ. ಆದರೆ 1 ಪಾಯಿಂಟ್ ಗಳಿಸಿದರೆ 2023ರ ಏಷ್ಯಾಕಪ್‌ಗೆ ಅರ್ಹತೆ ಗಳಿಸಲು ರಹದಾರಿ ಒದಗಲಿದೆ.

ಎಲ್ಲ ವಿಭಾಗದಲ್ಲೂ ಸುಧಾರಣೆ ಅಗತ್ಯ:ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಭಾರತ ತಂಡ ಆಕ್ರಮಣದಲ್ಲಿ ಮಾತ್ರವಲ್ಲ, ರಕ್ಷಣಾ ವಿಭಾಗದಲ್ಲೂ ವೈಫಲ್ಯ ಕಂಡಿದೆ. ಆಕ್ರಮಣದಲ್ಲಿ ನಾಯಕ ಸುನಿಲ್ ಚೆಟ್ರಿ ಅವರನ್ನೇ ಅವಲಂಬಿಸಿರುವುದು ತಂಡಕ್ಕೆ ಮಾರಕವಾಗಿದೆ. ಅಂತಿಮ ನಿಮಿಷಗಳಲ್ಲಿ ಗೋಲು ಬಿಟ್ಟುಕೊಡುತ್ತಿರುವುದನ್ನು ತಡೆಯಲು ಸಾಧ್ಯವಾಗದೇ ಇರುವುದು ತಂಡದ ಆತಂಕಕ್ಕೆ ಕಾರಣವಾಗಿದೆ.

ತಾಯಿಯ ಸಾವಿನಿಂದಾಗಿ ತವರಿಗೆ ಮರಳಿರುವ ಅನಾಸ್ ಎಡತೋಡಿಕಾ ಇನ್ನೂ ವಾಪಸಾಗಲಿಲ್ಲ. ಗಾಯಗೊಂಡಿರುವ ಸಂದೇಶ್ ಜಿಂಗಾನ್, ರಾವ್ಲಿಂಗ್ ಬೋರ್ಜೆಸ್ ಮತ್ತು ಅಮರ್‌ಜೀತ್ ಸಿಂಗ್ ಕೂಡ ಮಂಗಳವಾರ ಆಡಲು ಲಭ್ಯರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.