
ನವದೆಹಲಿ: ಭಾರತದ 20 ವರ್ಷದೊಳಗಿನ ಮಹಿಳೆಯರ ತಂಡವು ಮಂಗಳವಾರ ಎರಡನೇ ಮತ್ತು ಕೊನೆಯ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ಕಜಾಕಸ್ತಾನದ 19 ವರ್ಷದೊಳಗಿನ ಮಹಿಳೆಯರ ತಂಡದ ಎದುರು 1–1ರಿಂದ ಡ್ರಾ ಸಾಧಿಸಿತು.
ಕಜಾಕಸ್ತಾನದ ಶೈಮ್ಕೆಂಟ್‌ನಲ್ಲಿರುವ ಬಿಐಐಕೆ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮೊದಲಾರ್ಧ ಯಾವುದೇ ತಂಡಕ್ಕೆ ಗೋಲು ಲಭಿಸಲಿಲ್ಲ. 47ನೇ ನಿಮಿಷದಲ್ಲಿ ಅಡೆಲಿಯಾ ಬೆಕ್ಕೊಜಿನಾ ಗೋಲು ಗಳಿಸಿ, ಆತಿಥೇಯ ತಂಡಕ್ಕೆ ಮುನ್ನಡೆ ಒದಗಿಸಿದರು. ಅದಾದ ಎಂಟು ನಿಮಿಷದಲ್ಲಿ ಭಾರತದ ಪೂಜಾ (55ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿದ್ದರಿಂದ ಉಭಯ ತಂಡಗಳ ಸ್ಕೋರ್ ಸಮನಾಯಿತು.
2026ರ ಎಎಫ್‌ಸಿ 20 ವರ್ಷದೊಳಗಿನ ಮಹಿಳಾ ಏಷ್ಯನ್ ಕಪ್ ಟೂರ್ನಿಯ ತಯಾರಿಯ ಭಾಗವಾಗಿ ಉಭಯ ತಂಡಗಳು ಎರಡು ಸೌಹಾರ್ದ ಪಂದ್ಯವನ್ನು ಆಡಿದವು. ಶನಿವಾರ ಮೊದಲ ಪಂದ್ಯವನ್ನು ಭಾರತ 3–2ರಿಂದ ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.