ADVERTISEMENT

ಕಿಂಗ್ಸ್‌ ಕಪ್‌ನಲ್ಲಿ ಭಾರತ ಕಣಕ್ಕೆ

ಪಿಟಿಐ
Published 9 ಏಪ್ರಿಲ್ 2019, 15:43 IST
Last Updated 9 ಏಪ್ರಿಲ್ 2019, 15:43 IST
ಕುಶಾಲ್ ದಾಸ್‌
ಕುಶಾಲ್ ದಾಸ್‌   

ನವದೆಹಲಿ: ಭಾರತ ಪುರುಷರ ಫುಟ್‌ಬಾಲ್‌ ತಂಡದವರು ಜೂನ್‌ನಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯುವ ಕಿಂಗ್ಸ್‌ ಕಪ್‌ ಟೂರ್ನಿಯಲ್ಲಿ ಆಡಲಿದ್ದಾರೆ.

ಟೂರ್ನಿಯ ಎಲ್ಲಾ ಪಂದ್ಯಗಳು ಬುರಿರಾಮ್‌ನ ಚಾಂಗ್‌ ಅರೆನಾದಲ್ಲಿ ಆಯೋಜನೆಯಾಗಿವೆ.

ಭಾರತ, ಆತಿಥೇಯ ಥಾಯ್ಲೆಂಡ್‌, ವಿಯೆಟ್ನಾಂ ಮತ್ತು ಕ್ಯುರಾಕಾವೊ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ADVERTISEMENT

ಭಾರತ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿದೆ. ಥಾಯ್ಲೆಂಡ್‌, ವಿಯೆಟ್ನಾಂ ಮತ್ತು ಕ್ಯುರಾಕಾವೊ ಕ್ರಮವಾಗಿ 114, 98 ಮತ್ತು 82ನೇ ಸ್ಥಾನಗಳನ್ನು ಹೊಂದಿವೆ.

ಥಾಯ್ಲೆಂಡ್‌ ಫುಟ್‌ಬಾಲ್‌ ಸಂಸ್ಥೆಯು 1968ರಲ್ಲಿ ಮೊದಲ ಸಲ ಕಿಂಗ್ಸ್‌ ಕಪ್‌ ಆಯೋಜಿಸಿತ್ತು. 1977ರಲ್ಲಿ ಭಾರತ ತಂಡ ಟೂರ್ನಿಯಲ್ಲಿ ಪಾಲ್ಗೊಂಡಿತ್ತು. 18 ವರ್ಷಗಳ ನಂತರ ಭಾರತ ತಂಡವು ಫಿಫಾ ರ‍್ಯಾಂಕಿಂಗ್‌ ಟೂರ್ನಿಯಲ್ಲಿ ಆಡುತ್ತಿದೆ.

‘ಸೆಪ್ಟೆಂಬರ್‌ನಲ್ಲಿ ಫಿಫಾ 2020ರ ವಿಶ್ವಕಪ್‌ ಅರ್ಹತಾ ಟೂರ್ನಿ ನಡೆಯಲಿದೆ. ಅದಕ್ಕೂ ಮುನ್ನ ತಂಡಕ್ಕೆ ನೂತನ ಕೋಚ್‌ ನೇಮಿಸಲಾಗುತ್ತದೆ. ತಂಡದ ಆಟಗಾರರ ಸಾಮರ್ಥ್ಯ ಅರಿಯಲು ಹೊಸ ಕೋಚ್‌ಗೆ ಕಿಂಗ್ಸ್‌ ಕಪ್‌ ಸಹಕಾರಿಯಾಗಲಿದೆ. ವಿಶ್ವಕಪ್‌ ಅರ್ಹತಾ ಟೂರ್ನಿಗೆ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲೂ ನಮ್ಮ ಆಟಗಾರರಿಗೆ ಈ ಟೂರ್ನಿ ವೇದಿಕೆಯಾಗಲಿದೆ. ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ನೀಡಿದ ಥಾಯ್ಲೆಂಡ್‌ ಫುಟ್‌ಬಾಲ್‌ ಸಂಸ್ಥೆಗೆ ನಾವು ಆಭಾರಿಯಾಗಿದ್ದೇವೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಮಹಾ ಕಾರ್ಯದರ್ಶಿ ಕುಶಾಲ್‌ ದಾಸ್‌ ತಿಳಿಸಿದ್ದಾರೆ.

2018ರ ಕಿಂಗ್ಸ್‌ ಕಪ್‌ನಲ್ಲಿ ಸ್ಲೊವೇಕಿಯಾ ಚಾಂಪಿಯನ್‌ ಆಗಿತ್ತು. ಫೈನಲ್‌ನಲ್ಲಿ ಈ ತಂಡ 3–2 ಗೋಲುಗಳಿಂದ ಥಾಯ್ಲೆಂಡ್‌ ಎದುರು ಗೆದ್ದಿತ್ತು. ಗ್ಯಾಬೊನ್‌ ತಂಡ 1–0 ಗೋಲಿನಿಂದ ಯುಎಇ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.