ADVERTISEMENT

ಐಎಸ್‌ಎಲ್‌: ಗೆಲುವಿನ ಓಟ ಮುಂದುವರಿಸಲು ಬಿಎಫ್‌ಸಿ ತವಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 13:38 IST
Last Updated 3 ಜನವರಿ 2025, 13:38 IST
<div class="paragraphs"><p>ಐಎಸ್‌ಎಲ್‌</p></div>

ಐಎಸ್‌ಎಲ್‌

   

ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡ, ಜೆಆರ್‌ಡಿ ಟಾಟಾ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆಯುವ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಪಂದ್ಯದಲ್ಲಿ ಜಮ್‌ಷೆಡ್‌ಪುರ ಎಫ್‌ಸಿ (ಜೆಎಫ್‌ಸಿ) ತಂಡವನ್ನು ಎದುರಿಸಲಿದ್ದು ಹೊಸ ವರ್ಷವನ್ನು ಗೆಲುವಿನೊಡನೆ ಆರಂಭಿಸುವ ಉತ್ಸಾಹದಲ್ಲಿದೆ.

ಹಾಲಿ ಋತುವಿನಲ್ಲಿ ಆಡಿರುವ 13 ಪಂದ್ಯಗಳಲ್ಲಿ ಎಂಟು ಗೆಲುವು, ಮೂರು ಡ್ರಾ ಹಾಗೂ ಎರಡು ಸೋಲು ಕಂಡಿರುವ ಬಿಎಫ್‌ಸಿ ಒಟ್ಟು 27 ಪಾಯಿಂಟ್ಸ್ ಕಲೆಹಾಕಿ ಲೀಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಮೋಹನ್ ಬಾಗನ್ (14 ಪಂದ್ಯಗಳಿಂದ 32) ಅಗ್ರಸ್ಥಾನದಲ್ಲಿದೆ.

ADVERTISEMENT

ಬಿಎಫ್‌ಸಿ ವಿರುದ್ಧ ತನ್ನ ಕಳಪೆ ಪ್ರದರ್ಶನವನ್ನು ತೊಡೆದುಹಾಕಲು ಜಮ್‌ಷೆಡ್‌ಪುರ ತಂಡ ಕೂಡ ಹವಣಿಸುತ್ತಿದೆ. ಇದುವರೆಗೆ ಮುಖಾಮುಖಿಯಾಗಿರುವ ಆರು ಪಂದ್ಯಗಳಲ್ಲಿ ಉಕ್ಕಿನ ನಗರಿಯ ತಂಡ ಎರಡು ಡ್ರಾ ಮಾಡಿಕೊಂಡಿದ್ದು, ಉಳಿದ ನಾಲ್ಕನ್ನು ಸೋತಿದೆ. ಇಲ್ಲಿ

ಬಿಎಫ್‌ಸಿ ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು, ಒಂದು ಡ್ರಾ ಮಾಡಿಕೊಂಡು ಯಶಸ್ಸು ಮುಂದುವರಿಸುವ ಗುರಿಯಲ್ಲಿದೆ.

ಬಿಎಫ್‌ಸಿ ತಂಡ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಕೊನೆಯ ಆರು ಐಎಸ್‌ಎಲ್‌ ಪಂದ್ಯಗಳಲ್ಲಿ ಕಡೇಪಕ್ಷ ಎರಡು ಗೋಲುಗಳನ್ನು ದಾಖಲಿಸುತ್ತಾ ಬಂದಿದೆ. ಇನ್ನೊಂದು ಕಡೆ ಜಮ್‌ಷೆಡ್‌ಪುರ ಎಫ್‌ಸಿ ತವರಿನಲ್ಲಿ ಆಡಿದ ಕೊನೆಯ 9 ಪಂದ್ಯಗಳಲ್ಲಿ ಪ್ರತಿ ಬಾರಿ ಒಂದೊಂದು ಗೋಲು ಗಳಿಸುವಲ್ಲಿ ಯಶಸ್ವಿ ಆಗಿದೆ.

ಬಿಎಫ್‌ಸಿ ತನ್ನ ಹೆಚ್ಚಿನ ಪಂದ್ಯಗಳಲ್ಲಿ ವಿರಾಮದ ನಂತರ ಹಿನ್ನಡೆ ಗೆಲುವನ್ನೂ ದಾಖಲಿಸಿದೆ. ಅದರ 16 ಗೋಲುಗಳು ಉತ್ತರಾರ್ಧದಲ್ಲಿ ಬಂದಿವೆ. ಹೀಗಾಗಿ ಜಮ್‌ಷೆಡ್‌ಪುರ ತಂಡದ ಬ್ಯಾಕ್‌ಲೈನ್‌ ಆಟಗಾರರು ಪಂದ್ಯದುದ್ದಕ್ಕೂ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ.

ಬೆಂಗಳೂರಿನ ತಂಡ ತನ್ನ ಕೊನೆಯ ಪಂದ್ಯದಲ್ಲಿ 4–2 ಗೋಲುಗಳಿಂದ ಚೆನ್ನೈಯಿನ್ ಎಫ್‌ಸಿ ವಿರುದ್ಧ ಜಯಗಳಿಸಿದೆ. ರಯಾನ್ ವಿಲಿಯಮ್ಸ್ ಅವಳಿ ಗೋಲುಗಳನ್ನು ಗಳಿಸಿದ್ದರು. ‘ಎಂದಿನ ಶೈಲಿಯ ಆಟ ಮುಂದುವರಿಸುವುದು ನಮ್ಮ ಯೋಜನೆಯಾಗಿದೆ. ಆಕ್ರಮಣ ಮತ್ತು ರಕ್ಷಣೆ ಎರಡರಲ್ಲೂ ಮುಂಚೂಣಿಯಲ್ಲಿರಬೇಕೆಂಬುದು ನಮ್ಮ ಅಪೇಕ್ಷೆ’ ಎಂದು ಬಿಎಫ್‌ಸಿ ಕೋಚ್‌ ಜೆರಾಲ್ಡ್ ಜಾರ್ಗೊಸಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.