ಬ್ಯಾಂಬೊಲಿಮ್, ಗೋವಾ: ನೆರೆಲಿಯಸ್ ವಲಸ್ಕಿಸ್ ಹೊಡೆದ ಎರಡು ಗೋಲುಗಳ ಬಲದಿಂದ ಜೆಮ್ಶೆಡ್‌ಪುರ ಫುಟ್‌ಬಾಲ್ ಕ್ಲಬ್ ತಂಡವು ಇಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಗೋವಾ ಎಫ್‌ಸಿ ವಿರುದ್ಧ ಜಯಭೇರಿ ಬಾರಿಸಿತು.
ಶುಕ್ರವಾರ ನಡೆದ ಪಂದ್ಯದ ಬಹುತೇಕ ಸಮಯದಲ್ಲಿ ಉಭಯ ತಂಡಗಳು ನಡುವೆ ತುರುಸಿನ ಪೈಪೋಟಿ ಕಂಡುಬಂದಿತು. 51ನೇ ನಿಮಿಷದಲ್ಲಿ ಜೆಎಫ್‌ಸಿ ತಂಡದ ನೆರೆಲಿಯಸ್ ಎದುರಾಳಿ ಬಳಗದ ರಕ್ಷಣಾ ಗೋಡೆಯನ್ನು ದಾಟುವಲ್ಲಿ ಸಫರಾದರು. ಮೊದಲ ಗೋಲು ಹೊಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಹತ್ತು ನಿಮಿಷಗಳ ನಂತರ ಮತ್ತೊಮ್ಮೆ ಕಾಲ್ಚಳಕ ತೋರಿದ ನೆರೆಲಿಯಸ್ ತಂಡದ ಗೆಲುವಿಗೆ ಮುನ್ನಡಿ ಬರೆದರು.
ಇನ್ನೊಂದೆಡೆ ಜೆಎಫ್‌ಸಿಯ ರಕ್ಷಣಾ ಆಟಗಾರರು ಗೋವಾದ ಫಾರ್ವರ್ಡ್ ಆಟಗಾರರಿಗೆ ಕಠಿಣ ಸವಾಲೊಡ್ಡಿದರು. ಇದರಿಂದಾಗಿ ಗೊವಾ ತಂಡದ ಗೋಲು ಗಳಿಸುವ ಪ್ರಯತ್ನಗಳಿಗೆ ಫಲ ದೊರಕಲಿಲ್ಲ. ಇದರಿಂದಾಗಿ ಒತ್ತಡದಲ್ಲಿದ್ದ ಗೋವಾ ತಂಡಕ್ಕೆ ಜೆಎಫ್‌ಸಿಯು ಮತ್ತೊಂದು ಪೆಟ್ಟುಕೊಟ್ಟಿತು. 80ನೇ ನಿಮಿಷದಲ್ಲಿ ಜೋರ್ಡಾನ್ ಮರೆ ಹೊಡೆದ ಗೋಲಿನಿಂದ ತಂಡವು 3–0 ಮುನ್ನಡೆ ಸಾಧಿಸಿಬಿಟ್ಟಿತು.
ಆರು ನಿಮಿಷಗಳ ನಂತರ ಗೋವಾಕ್ಕೆ ಒಂದು ಗೋಲು ಗಳಿಸಕೊಡುವಲ್ಲಿ ಐರೆಮ್ ಕೆಬೆರೆರಾ (86ನೇ ನಿ) ಯಶಸ್ವಿಯಾದರು. ಇದರಿಂದಾಗಿ ತಂಡದ ಸೋಲಿನ ಅಂತರ ಕಡಿಮೆ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.