ADVERTISEMENT

ಈ ವರ್ಷ ಇಂಡಿಯನ್‌ ಸೂಪರ್‌ ಲೀಗ್‌ ನಡೆಯಲಿದೆ: ಚೌಬೆ ಅಭಯ

10 ದಿನಗಳಲ್ಲಿ ಹೊಸ ಕೋಚ್‌ ನೇಮಕ

ಪಿಟಿಐ
Published 24 ಜುಲೈ 2025, 16:06 IST
Last Updated 24 ಜುಲೈ 2025, 16:06 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ನವದೆಹಲಿ: ಸದ್ಯಕ್ಕೆ ನನೆಗುದಿಯಲ್ಲಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿ ಈ ವರ್ಷ ನಡೆಯಲಿದೆ ಎಂದು ಭಾರತ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ಅವರು ಗುರುವಾರ ಭರವಸೆ ನೀಡಿದರು. ಆದರೆ ದೇಶದ ಅತ್ಯುನ್ನತ ಲೀಗ್ ಆರಂಭದ ದಿನಾಂಕವನ್ನು ಅವರು ಸ್ಪಷ್ಟಪಡಿಸಲಿಲ್ಲ.

ಭಾರತ ಪುರುಷರ ತಂಡಕ್ಕೆ ಹೊಸ ಹೆಡ್‌ ಕೋಚ್‌ ನೇಮಕ ಮುಂದಿನ 10 ದಿನಗಳ ಒಳಗೆ ನಡೆಯಲಿದೆ. ತಾಂತ್ರಿಕ ಸಮಿತಿಯು ಅಂತಿಮಗೊಳಿಸಿದ ಮೂವರು ಆಕಾಂಕ್ಷಿಗಳ ಹೆಸರನ್ನು ಬುಧವಾರ ಎಐಎಫ್‌ಎಫ್‌ಗೆ ಕಳುಹಿಸಿದೆ.

ADVERTISEMENT

‘ಲೀಗ್ ನಡೆಯಲಿದೆ ಎಂದು ಎಐಎಫ್‌ಎಫ್‌ ಅಧ್ಯಕ್ಷನಾಗಿ ನಾನು ಭರವಸೆ ನೀಡುತ್ತಿದ್ದೇನೆ. ಆದರೆ ಸಮಯ ನಿಗದಿ ಮಾಡಬೇಕಿದೆ. ಅಂತರರಾಷ್ಟ್ರೀಯ ವೇಳಾಪಟ್ಟಿ, ದೇಶದ ಹೊರಗೆ ಮತ್ತು ತವರಿನ ಪಂದ್ಯಗಳು, ಇವೆಲ್ಲವೂ ಗಣನೆಗೆ ಬರುತ್ತವೆ’ ಎಂದು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಪತ್ರಿಕಾಗೋಷ್ಠಿಗೆ ಬಂದಿದ್ದ ಸಂದರ್ಭದಲ್ಲಿ ಚೌಬೆ ಪಿಟಿಐಗೆ ತಿಳಿಸಿದರು. ಚೌಬೆ ಐಒಎ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

‘ಲೀಗ್‌ ನಡೆಯದಿದ್ದರೆ, ಅದು ಫುಟ್ಬಾಲಿಗರಿಗೆ ಮಾತ್ರವಲ್ಲ, ಇದರ ಜೊತೆಗೆ ಸಂಬಂಧ ಹೊಂದಿರುವವರ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಲೀಗ್‌ ನಡೆಸಲು ನಮ್ಮಿಂದ ಏನು ಸಾಧ್ಯವೊ ಅವೆಲ್ಲವನ್ನು ಮಾಡುತ್ತಿದ್ದೇವೆ’ ಎಂದು ಚೌಬೆ ವಿವರಿಸಿದರು.

2025–26ನೇ ಋತುವಿನ ಐಎಸ್‌ಎಲ್‌ ತಡೆಹಿಡಿಯಲಾಗಿದೆ ಎಂದು ಲೀಗ್‌ನ ಆಯೋಜಕರಾದ ಎಫ್‌ಎಸ್‌ಡಿಎಸ್‌ ಜುಲೈ 11 ರಂದು ತಿಳಿಸಿತ್ತು. ಎಐಎಫ್‌ಎಫ್‌ ಜೊತೆ 2010ರಲ್ಲಿ ಸಹಿ ಮಾಡಲಾಗಿದ್ದ ಮಾಸ್ಟರ್‌ ರೈಟ್ಸ್‌ ಅಗ್ರಿಮೆಂಟ್‌ (ಎಂಆರ್‌ಎ) ನವೀಕರಣಕ್ಕೆ ಸಂಬಂಧಿಸಿದ ಅನಿಶ್ಚಿತತೆ ಇದಕ್ಕೆ ಕಾರಣ ಎಂದು ತಿಳಿಸಿತ್ತು. ಈ ಒಪ್ಪಂದದ ಅವಧಿ ಇದೇ ಡಿಸೆಂಬರ್‌ 8ಕ್ಕೆ ಅಂತ್ಯಗೊಳ್ಳಲಿದೆ.

ಎಫ್‌ಎಸ್‌ಡಿಎಲ್‌ ಜೊತೆ ಯಾವುದೇ ಹೊಸ ಕರಾರುಗಳಿಗೆ ಸಂಬಂಧಿಸಿ ಮಾತುಕತೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ ಎಐಎಫ್‌ಎಫ್‌ಗೆ ನಿರ್ದೇಶನ ನೀಡಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.