ADVERTISEMENT

ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌: ಸೆಮಿಗೆ ಗೋಕುಲಂ ಎಫ್‌ಸಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 16:41 IST
Last Updated 7 ಫೆಬ್ರುವರಿ 2020, 16:41 IST
ಶ್ರೀಭೂಮಿ ತಂಡದ ಆರತಿ (ಎಡ) ಮತ್ತು ಒಡಿಶಾ ತಂಡದ ಕರಿಷ್ಮಾ ಅವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಶ್ರೀಭೂಮಿ ತಂಡದ ಆರತಿ (ಎಡ) ಮತ್ತು ಒಡಿಶಾ ತಂಡದ ಕರಿಷ್ಮಾ ಅವರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗೋಕುಲಂ ಎಫ್‌ಸಿ ಕೇರಳ ತಂಡ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೋಕುಲಂ 5–0 ಗೋಲುಗಳಿಂದ ಬಿದೇಶ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡವನ್ನು ಮಣಿಸಿತು.

ಸೋಮವಾರ ನಡೆಯುವ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಗೋಕುಲಂ ತಂಡ ಹಾಲಿ ಚಾಂಪಿಯನ್‌ ಸೇತು ಎಫ್‌ಸಿ ವಿರುದ್ಧ ಸೆಣಸಲಿದೆ.

ADVERTISEMENT

ಇನ್ನೊಂದು ಸೆಮಿಫೈನಲ್‌ನಲ್ಲಿ ಕ್ರಿಪ್‌ಶಾ ಎಫ್‌ಸಿ ಮತ್ತು ಕೆಂಕ್ರೆ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ಬಿದೇಶ್‌ ಇಲೆವನ್‌ ಎದುರಿನ ಪಂದ್ಯದಲ್ಲಿ ಗೋಕುಲಂ ತಂಡ ನಾಲ್ಕನೇ ನಿಮಿಷದಲ್ಲಿ ಖಾತೆ ತೆರೆಯಿತು. ಯಮನಮ್‌ ಕಮಲಾ ದೇವಿ ಕಾಲ್ಚಳಕ ತೋರಿದರು.

57ನೇ ನಿಮಿಷದಲ್ಲಿ ಬಿದೇಶ್‌ ತಂಡದ ಸಿಂಧಿಯಾ ಸೌಂದತಿಕರ್‌ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಗುರಿ ಸೇರಿಸಿದರು. ಹೀಗಾಗಿ ಗೋಕುಲಂ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು.

ನಂತರ ಸಬಿತ್ರಾ ಭಂಡಾರಿ (63), ಥೊಕಚೊಮ್‌ ಉಮಾಪತಿ ದೇವಿ (82) ಮತ್ತು ಕರಿಷ್ಮಾ ಪುರುಷೋತ್ತಮ್‌ ಶಿರ್ವೋಯಿಕರ್‌ (86) ಅವರು ತಲಾ ಒಂದು ಗೋಲು ಬಾರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಒಡಿಶಾ ಪೊಲೀಸ್‌ ಮತ್ತು ಶ್ರೀಭೂಮಿ ಎಫ್‌ಸಿ ನಡುವಣ ‘ಬಿ’ ಗುಂಪಿನ ಮತ್ತೊಂದು ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು.

ಒಡಿಶಾ ಪರ ಟಿಕಿನಾ ಸಮಾಲ್‌ (26) ಗೋಲು ಗಳಿಸಿದರೆ, 79ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಶ್ರೀಭೂಮಿ ತಂಡದ ಪೂನಂ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.