ADVERTISEMENT

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ: ಶುಭಾರಂಭ ಮಾಡಿದ ಚೆನ್ನೈಯಿನ್ ಎಫ್‌ಸಿ

ಗೋಲು ಗಳಿಸಿದ ಅನಿರುದ್ಧ ತಾಪಾ, ಗೊಂಜಾಲ್ವಸ್, ವಲ್ಕಿಸ್

ಪಿಟಿಐ
Published 24 ನವೆಂಬರ್ 2020, 16:21 IST
Last Updated 24 ನವೆಂಬರ್ 2020, 16:21 IST
ಚೆನ್ನೈಯಿನ್ ಎಫ್‌ಸಿ ಪರ ಗೋಲು ಗಳಿಸಿದ ಅನಿರುದ್ಧ ತಾಪಾ ಅವರ ಸಂಭ್ರಮ –ಐಎಸ್‌ಎಲ್ ಮೀಡಿಯಾ ಚಿತ್ರ
ಚೆನ್ನೈಯಿನ್ ಎಫ್‌ಸಿ ಪರ ಗೋಲು ಗಳಿಸಿದ ಅನಿರುದ್ಧ ತಾಪಾ ಅವರ ಸಂಭ್ರಮ –ಐಎಸ್‌ಎಲ್ ಮೀಡಿಯಾ ಚಿತ್ರ   

ವಾಸ್ಕೊ: ಮೊದಲ ನಿಮಿಷದಲ್ಲೇ ಅನಿರುದ್ಧ ತಾಪಾ ಗಳಿಸಿಕೊಟ್ಟ ಗೋಲಿನ ಮೂಲಕ ಚೆನ್ನೈಯಿನ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಮಂಗಳವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಚೆನ್ನೈಯಿನ್‌ ತಂಡ ಜೆಮ್ಶೆಡ್‌ಪುರ್ ಎಫ್‌ಸಿಯನ್ನು 2–1 ಗೋಲುಗಳಿಂದ ಮಣಿಸಿತು.

ಕಳೆದ ವರ್ಷ ಚೆನ್ನೈಯಿನ್ ತಂಡವನ್ನು ಸೋಲಿನ ಪ್ರಪಾತದಿಂದ ಮೇಲೆತ್ತಿದ ಕೋಚ್ ಓವೆನ್ ಕೊಯ್ಲೆ ಈ ಬಾರಿ ಜೆಮ್ಶೆಡ್‌ಪುರ ತಂಡದ ತರಬೇತುದಾರ. ಅವರು ಹೇಳಿಕೊಟ್ಟ ತಂತ್ರಗಳನ್ನು ಕಾರ್ಯಗತಗೊಳಿಸಲು ಜೆಮ್ಶೆಡ್‌ಪುರ ತಂಡದ ಆಟಗಾರರು ಪ್ರಯತ್ನಿಸುತ್ತಿದ್ದಾಗಲೇ ಅನಿರುದ್ಧ ತಾಪಾ ಆಘಾತ ನೀಡಿದರು. ಸೊಗಸಾದ ಗೋಲು ಗಳಿಸಿ ಚೆನ್ನೈಯಿನ್‌ಗೆ ಮುನ್ನಡೆ ಗಳಿಸಿಕೊಟ್ಟರು.

ನಾಯಕ ರಫೆಲ್ ಕ್ರಿವೆಲಾರೊ ಬಲಭಾಗದಲ್ಲಿ ಚೆಂಡನ್ನು ನಿಯಂತ್ರಿಸಿ ಮಧ್ಯಭಾಗಕ್ಕೆ ಅಟ್ಟಿದರು. ಓಡುತ್ತ ಬಂದು ಎದುರಾಳಿ ತಂಡದ ಆಟಗಾರರ ಮಧ್ಯದಲ್ಲೇ ಚೆಂಡನ್ನು ತಾಪ ಅವರತ್ತ ಅಟ್ಟಿದವರು ಗೊಂಜಾಲ್ವಸ್. ಅರೆಕ್ಷಣವೂ ತಡಮಾಡದ ಮಿಡ್‌ಫೀಲ್ಡರ್ ತಾಪ ರಕ್ಷಣಾ ವಿಭಾಗದ ಆಟಗಾರರನ್ನು ವಂಚಿಸಿ ಚೆಂಡನ್ನು ಗುರಿಯತ್ತ ತಳ್ಳಿದರು. ಮಿಂಚಿನ ವೇಗದಲ್ಲಿ ನುಗ್ಗಿದ ಚೆಂಡನ್ನು ತಡೆಯಲು ಗೋಲ್‌ಕೀಪರ್ ಟಿ.ಪಿ.ರೆಹನೇಶ್‌ಗೆ ಸಾಧ್ಯವಾಗಲಿಲ್ಲ. ಏಳನೇ ನಿಮಿಷದಲ್ಲಿ ಚೆನ್ನೈಯಿನ್‌ಗೆ ಉತ್ತಮ ಅವಕಾಶ ಒದಗಿತ್ತು. ಫ್ರೀಕಿಕ್‌ನಲ್ಲಿ ಲಭಿಸಿದ ಚೆಂಡನ್ನು ಪೀಟರ್ ವಿಲಿಯಮ್ ಹಾರ್ಟ್ಲಿ ಹೆಡ್ ಮಾಡಿ ಗುರಿ ಮುಟ್ಟಿಸಲು ಪ್ರಯತ್ನಿಸಿ ವಿಫಲರಾದರು. 10ನೇ ನಿಮಿಷದಲ್ಲೂ ಅತ್ಯುತ್ತಮ ಅವಕಾಶವನ್ನು ಚೆನ್ನೈಯಿನ್ ಕೈಚೆಲ್ಲಿತು. 20ನೇ ನಿಮಿಷದಲ್ಲಿ ಅಪಾಯಕಾರಿ ಆಕ್ರಮಣವನ್ನು ರೆಹನೇಶ್ ತಡೆದರು.

ADVERTISEMENT

26ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಚೆನ್ನೈಯಿನ್ ಫಲ ಕಂಡಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಲಾಲಿಯಂಜ್ವಾಲ ಚಾಂಗ್ಟೆ ಜೊತೆ ನಡೆಸಿದ ಸೆಣಸಾಟದ ಕೊನೆಯಲ್ಲಿ ವನ್ಮಲ್‌ಸ್ವಾವ್ಮ ತಪ್ಪು ಎಸಗಿದರು. ಹೀಗಾಗಿ ಚೆನ್ನೈಯಿನ್‌ಗೆ ಪೆನಾಲ್ಟಿ ಅವಕಾಶ ಲಭಿಸಿತು. ಗೊಂಜಾಲ್ವಸ್ ಸೊಗಸಾಗಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.

ಆದರೆ 37ನೇ ನಿಮಿಷದಲ್ಲಿ ಜಾಕಿಚಾಂದ್ ಮತ್ತುನೆರಿಜಸ್ ವಲ್ಕಿಸ್ ಜೋಡಿಯ ಚಾಕಚಕ್ಯ ಆಟ ಜೆಮ್ಶೆಡ್‌ಪುರ ತಂಡಕ್ಕೆ ಗೋಲು ತಂದುಕೊಟ್ಟಿತು. ಜಾಕಿಚಾಂದ್ ಸಿಂಗ್ ಅವರ ಮೋಹಕ ಮತ್ತು ನಿಖರ ಪಾಸ್ ಅನ್ನು ಹೆಡ್ ಮಾಡಿದವಲ್ಕಿಸ್ ತಂಡದಲ್ಲಿ ಸಂಭ್ರಮ ಮೂಡಿಸಿದರು. ಮೊದಲಾರ್ಧದ ಕೊನೆಯ ನಿಮಿಷದಲ್ಲಿ ನಾಯಕ ನೀಡಿದ ಪಾಸ್‌ನಲ್ಲಿ ಚೆನ್ನೈ ಪರ ಗೋಲು ಗಳಿಸಲು ನರೇಂದರ್ ಗೆಹ್ಲೋಟ್‌ಗೆ ಅವಕಾಶ ಒದಗಿತ್ತು. ಆದರೆ ಅವರು ಒದ್ದ ಚೆಂಡು ಹೊರಗೆ ಚಿಮ್ಮಿತು.

ದ್ವಿತೀಯಾರ್ಧದಲ್ಲಿ ಭರ್ಜರಿ ಕಾದಾಟ

2–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಚೆನ್ನೈಯಿನ್‌ಗೆ ದ್ವಿತೀಯಾರ್ಧಲ್ಲಿ ಮುನ್ನಡೆ ಹೆಚ್ಚಿಸಲು ಆಗಲಿಲ್ಲ. ಸಮಬಲ ಸಾಧಿಸಲು ಈ ತಂಡ ಎದುರಾಳಿಗಳಿಗೆ ಅವಖಾಶವನ್ನೂ ನೀಡಲಿಲ್ಲ. ಚೆನ್ನೈಯಿನ್ ತಂಡ ಒಂದೆರಡು ಬಾರಿ ಭಾರಿ ಆಕ್ರಮಣ ಮಾಡಿತು. ಆದರೆ ಗೋಲ್‌ಕೀಪರ್ ಅದನ್ನು ತಡೆದು ಜೆಮ್ಶೆಡ್‌ಪುರ ಆಟಗಾರರು ನಿಟ್ಟುಸಿರು ಬಿಡುವಂತೆ ಮಾಡಿದರು. ಸತತ ಅವಕಾಶಗಳನ್ನು ಕೈಚೆಲ್ಲಿದರೂ ಮೊದಲ ಪಂದ್ಯದ ಗೆಲುವಿನೊಂದಿಗೆ ಚೆನ್ನೈ ನಗೆ ಸೂಸಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.