ADVERTISEMENT

ಜೆಎಫ್‌ಸಿ ಕೋಟೆ ಭೇದಿಸಿದ ಬಿಎಫ್‌ಸಿ

ಐಎಸ್‌ಎಲ್‌: ರಂಜಿಸಿದ ಆಕ್ರಮಣಕಾರಿ ಆಟ; ಆತಿಥೇಯರಿಗೆ ಜಯದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 20:00 IST
Last Updated 9 ಜನವರಿ 2020, 20:00 IST
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಎಸ್‌ಎಲ್‌ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಕ್ಲಬ್‌ನ ಅಮರ್‌ಜಿತ್‌ ಹಾಗೂ ಬಿಎಫ್‌ಸಿ ತಂಡದ ಸುನಿಲ್‌ ಚೆಟ್ರಿ ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಎಸ್‌ಎಲ್‌ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಕ್ಲಬ್‌ನ ಅಮರ್‌ಜಿತ್‌ ಹಾಗೂ ಬಿಎಫ್‌ಸಿ ತಂಡದ ಸುನಿಲ್‌ ಚೆಟ್ರಿ ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕಾರಿ ಹಣಾಹಣಿಯಲ್ಲಿಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಮೇಲುಗೈ ಸಾಧಿಸಿತು.

ಜೆಮ್‌ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ವಿರುದ್ಧ ಗುರುವಾರ ರಾತ್ರಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯರು 2–0 ಗೋಲುಗಳ ಜಯ ಸಾಧಿಸಿದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.

ನಾಲ್ವರು ಡಿಫೆಂಡರ್‌ಗಳು ಮತ್ತು ಮೂವರು ಫಾರ್ವರ್ಡ್‌ಗಳೊಂದಿಗೆ ಕಣಕ್ಕೆ ಇಳಿದ ಬಿಎಫ್‌ಸಿಗೆ ಸವಾಲೆಸೆಯಲು ತಲಾ ಮೂವರು ಡಿಫೆಂಡರ್‌ಗಳು ಮತ್ತು ಫಾರ್ವರ್ಡ್‌ ಆಟಗಾರರೊಂದಿಗೆ ಜೋಸ್‌ ಲೂಯಿಸ್ ಬಳಗ ಸಜ್ಜಾಗಿತ್ತು. ಆರಂಭದಿಂದಲೇ ಸುನಿಲ್ ಚೆಟ್ರಿ ಪಡೆ ಆಕ್ರಮಣಕ್ಕಿಳಿಯಿತು. ಜೆಎಫ್‌ಸಿಯೂ ಆಟಕ್ಕೆ ಕುದುರಿಕೊಳ್ಳಲು ತಡಮಾಡಲಿಲ್ಲ.

ADVERTISEMENT

ಎಂಟನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಗಳಿಸಿಕೊಡುವಲ್ಲಿ ಎರಿಕ್ ಪಾರ್ಟಲು ಯಶಸ್ವಿಯಾದರು.

‘ಸೆಟ್‌ ಪೀಸ್’ ಮೂಲಕ ಗೋಲುಮೂಡಿಬಂದಾಗ ತವರಿನ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ಎಡಭಾಗದಿಂದ ದಿಮಾಸ್ ತೆಗೆದ ಕಾರ್ನರ್ ಕಿಕ್, ಚೆಂಡನ್ನು ನಿಖರವಾಗಿ ಪಾರ್ಟಲು ಬಳಿಗೆ ತಲುಪಿಸಿತು. ಎತ್ತರಕ್ಕೆ ಜಿಗಿದ ಪಾರ್ಟಲು ಹೆಡ್ ಮಾಡಿ ಚೆಂಡನ್ನು ಗುರಿಮುಟ್ಟಿಸಿದರು.

ಆಶಿಕ್ ಮಿಂಚಿನ ಬ್ಲಾಕ್:ಆರಂಭದ ಆಘಾತವನ್ನು ಲೆಕ್ಕಿಸದ ಜೆಎಫ್‌ಸಿ ಆಟಗಾರರು ಚುರುಕಿನ ಆಟವಾಡಿದರು. ಮೊದಲಾರ್ಧದ ಮುಕ್ತಾಯಕ್ಕೆ ಏಳು ನಿಮಿಷಗಳಿದ್ದಾಗ ಸಮಬಲ ಸಾಧಿಸಲು ಅತ್ಯುತ್ತಮ ಅವಕಾಶ ಒದಗಿತ್ತು. ಡೇವಿಡ್ ಗ್ರ್ಯಾಂಡ್ ನೀಡಿದ ಪಾಸ್ ನಿಯಂತ್ರಿಸಿದ ಫಾರೂಕ್ ಚೌಧರಿ ಚೆಂಡಿನೊಂದಿಗೆ ಮಿಂಚಿನ ವೇಗದಲ್ಲಿ ಮುನ್ನುಗ್ಗಿದಾಗ ಬಿಎಫ್‌ಸಿ ಅಭಿಮಾನಿಗಳ ಎದೆ ನಡುಗಿತ್ತು. ಆದರೆ ಬಲಭಾಗದಲ್ಲಿ ರಕ್ಷಕನ ಪಾತ್ರ ವಹಿಸಿದ ಫಾರ್ವರ್ಡ್ ಆಟಗಾರ ಆಶಿಕ್ ಕುರುಣಿಯನ್ ಮನಮೋಹಕ ಬ್ಲಾಕ್ ಮೂಲಕ ಮಿಂಚಿದರು.

ಉದಾಂತ ಸಿಂಗ್ ಬಲ, ಚೆಟ್ರಿ ಮಾಯಾಜಾಲ: ದ್ವಿತೀಯಾರ್ಧದಲ್ಲೂ ಉಭಯ ತಂಡಗಳ ಆಕ್ರಮಣ ಎಗ್ಗಿಲ್ಲದೆ ಸಾಗಿತು. ಒನ್ವು ಬದಲಿಗೆ ಬಂದ ಉದಾಂತ ಸಿಂಗ್‌ ಬಿಎಫ್‌ಸಿಗೆ ಬಲ ತುಂಬಿದರು. 63ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಎದುರಾಳಿ ಗೋಲ್ ಕೀಪರ್ ಸುಬ್ರತಾ ಪಾಲ್‌ಗೆ ಚಳ್ಳೆಹಣ್ಣು ತಿನ್ನಿಸಿದರು. ಪಾರ್ಟಲು ದೂರದಿಂದ ನೀಡಿದ ಪಾಸ್‌ ಪಡೆದ ಚೆಟ್ರಿ ಗೋಲು ಪೆಟ್ಟಿಗೆಯ ಬಳಿ ಮ್ಯಾಜಿಕ್ ಮಾಡಿದರು. ತಲೆ ಮೂಲಕವೇ ಚೆಂಡನ್ನು ನಿಯಂತ್ರಿಸಿ ಸುಬ್ರತಾ ಪಾಲ್ ಮುಂದೆ ಬರುವಂತೆ ಮಾಡಿ, ನಾಜೂಕಾಗಿ ಚೆಂಡನ್ನು ಗುರಿಯತ್ತ ತಳ್ಳಿದರು. ನಂತರ ಅಂಗಣ ಜಿದ್ದಾಜಿದ್ದಿಯ ಹಣಾಹಣಿಗೆ ಸಾಕ್ಷಿಯಾಯಿತು. ನಿರಾಳವಾಗಿದ್ದ ಬಿಎಫ್‌ಸಿ ಮುನ್ನಡೆ ಹೆಚ್ಚಿಸುವ ಅವಕಾಶಗಳನ್ನು ಕೈಚೆಲ್ಲಿದರೆ, ಜೆಎಫ್‌ಸಿಯ ಗೋಲು ಗಳಿಸುವ ಕನಸಿಗೆ ಆತಿಥೇಯರ ಡಿಫೆಂಡರ್‌ಗಳು ಮತ್ತು ಗೋಲ್‌ಕೀಪರ್ ಅಡ್ಡಿಯಾದರು.

ಇಂದಿನ ಪಂದ್ಯ

ಹೈದರಾಬಾದ್ ಎಫ್‌ಸಿ–ಚೆನ್ನೈಯಿನ್ ಎಫ್‌ಸಿ,

ಸ್ಥಳ: ಹೈದರಾಬಾದ್;

ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ 2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.