ADVERTISEMENT

ಅಗ್ರಸ್ಥಾನಕ್ಕೆ ಬೆಂಗಳೂರು ಎಫ್‌ಸಿ

ಐಎಸ್‌ಎಲ್‌ ಫುಟ್‌ಬಾಲ್: ಗೋಲು ಗಳಿಸಿದ ಜುವಾನನ್

ಪಿಟಿಐ
Published 4 ಡಿಸೆಂಬರ್ 2019, 18:55 IST
Last Updated 4 ಡಿಸೆಂಬರ್ 2019, 18:55 IST
ಗೋಲು ಗಳಿಸಲು ಮುನ್ನುಗ್ಗಿದ ಬಿಎಫ್‌ಸಿಯ ಜುವಾನನ್
ಗೋಲು ಗಳಿಸಲು ಮುನ್ನುಗ್ಗಿದ ಬಿಎಫ್‌ಸಿಯ ಜುವಾನನ್   

ಪುಣೆ: ಒಡಿಶಾ ಎಫ್‌ಸಿಯ ಪ್ರಬಲ ಪೈಪೋಟಿಯನ್ನು ಮೆಟ್ಟಿನಿಂತ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ 1–0 ಅಂತರದ ಜಯದೊಂದಿಗೆ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ‍ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೆ ಲಗ್ಗೆ ಇರಿಸಿತು.

ಒಡಿಶಾ ತಂಡದ ತಾತ್ಕಾಲಿಕ ತವರು ಪುಣೆಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಜುವಾನನ್ ಗಳಿಸಿದ ಏಕೈಕ ಗೋಲು ಸುನಿಲ್ ಚೆಟ್ರಿ ಪಡೆಗೆ ಗೆಲುವು ತಂದುಕೊಟ್ಟಿತು. ಈ ಜಯದೊಂದಿಗೆ ತಂಡ 7 ಪಂದ್ಯಗಳಲ್ಲಿ 13 ಪಾಯಿಂಟ್ ಗಳಿಸಿತು.

ಪಂದ್ಯದ ಮೂರನೇ ನಿಮಿಷ ದಿಂದಲೇ ಬಿಎಫ್‌ಸಿ ಆಟಗಾರರು ಚಾಕಚಕ್ಯತೆ ಮೆರೆದರು. ಒಡಿಶಾದ ನಾರಾಯಣದಾಸ್ ಮತ್ತು ನಂದ ಕುಮಾರ್ ಅವರ ದಾಳಿಯನ್ನು ಆಲ್ಬರ್ಟ್ ಸೆರಾನ್ ಮೋಹಕವಾಗಿ ತಡೆದು ಗಮನ ಸೆಳದರು. 7ನೇ ನಿಮಿಷದಲ್ಲಿ ರಾಫೆಲ್ ಆಗಸ್ಟೊ ಮತ್ತು ಉದಾಂತ ಸಿಂಗ್ ಎದುರಾಳಿಗಳ ಆವರಣದಲ್ಲಿ ಆಕ್ರಮಣ ನಡೆಸಿದರು. ಆದರೆ ಡೆವಾಂಡು ಡ್ಯಾನೆ ಚೆಂಡನ್ನು ಎದೆಯಲ್ಲಿ ತಡೆದು ತಂಡವನ್ನು ಆತಂಕದಿಂದ ಪಾರು ಮಾಡಿದರು. 9ನೇ ನಿಮಿಷದಲ್ಲಿ ನಿಶುಕುಮಾರ್ ಮತ್ತು ಹರ್ಮನ್‌ಜ್ಯೋತ್ ಖಾಬ್ರಾ ಹೊಂದಾಣಿಕೆಯ ಆಟಕ್ಕೆ ಗೋಲು ಒಲಿಯುವ ಸಾಧ್ಯತೆ ಒದಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಖಾಬ್ರಾ ಗುರಿ ತಪ್ಪಿದರು.

ADVERTISEMENT

ಜುವಾನನ್‌ಗೆ ಸುಲಭ ಗೋಲು: 36ನೇ ನಿಮಿಷದಲ್ಲಿ ಬಿಎಫ್‌ಸಿಗೆ ಜುವಾನನ್ ಮುನ್ನಡೆ ಗಳಿಸಿಕೊಟ್ಟರು. ದಿಮಾಸ್ ಡೆಲ್ಗಾಡೊ ನೀಡಿದ ಕ್ರಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ನಿಶು ಕುಮಾರ್ ಅವರು ಎರಿಕ್ ಪಾರ್ತಲು ಕಡೆಗೆ ಗಾಳಿಯಲ್ಲಿ ತೂರಿಬಿಟ್ಟರು. ಅವರು ಹೆಡ್ ಮಾಡಿ ಜುವಾನನ್ ಕಡೆಗೆ ಕಳುಹಿಸಿದರು. ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ಬಡಿದು ಉರುಳುತ್ತ ಒಳನುಗ್ಗಿತು.

ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಒಡಿಶಾ ಸಮಬಲ ಸಾಧಿಸಲು ದ್ವಿತೀಯಾರ್ಧದಲ್ಲಿ ಭಾರಿ ಪೈಪೋಟಿ ನಡೆಸಿತು. ಆದರೆ ಬಿಎಫ್‌ಸಿ ಮುನ್ನಡೆಯನ್ನು ಬಿಟ್ಟುಕೊಡಲು ಸಿದ್ಧ ಇರಲಿಲ್ಲ. 87ನೇ ನಿಮಿಷದಲ್ಲಿ ಡ್ಯಾನಿಯೆಲ್ ಲಾಲ್ಹುಂಪುಯಾ ಅವರಿಗೆ ಉತ್ತಮ ಅವಕಾಶ ಒದಗಿತ್ತು. ಆದರೆ ಬಿಎಫ್‌ಸಿಯ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅದನ್ನು ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.