ADVERTISEMENT

ಇಂಡಿಯನ್ ಸೂಪರ್ ಲೀಗ್: ಗೆಲುವಿನ ವಿಶ್ವಾಸದಲ್ಲಿ ಚೆಟ್ರಿ ಪಡೆ

ಫುಟ್‌ಬಾಲ್‌ ಟೂರ್ನಿ: ಎಸ್‌ಸಿ ಈಸ್ಟ್ ಬೆಂಗಾಲ್ ಎದುರಾಳಿ

ಪಿಟಿಐ
Published 3 ಜನವರಿ 2022, 13:47 IST
Last Updated 3 ಜನವರಿ 2022, 13:47 IST
ಬೆಂಗಳೂರು ಎಫ್‌ಸಿಯ ಕ್ಲೀಟನ್ ಸಿಲ್ವಾ ಮತ್ತು ಸುನಿಲ್ ಚೆಟ್ರಿ– ಐಎಸ್‌ಎಲ್ ಮೀಡಿಯಾ ಚಿತ್ರ
ಬೆಂಗಳೂರು ಎಫ್‌ಸಿಯ ಕ್ಲೀಟನ್ ಸಿಲ್ವಾ ಮತ್ತು ಸುನಿಲ್ ಚೆಟ್ರಿ– ಐಎಸ್‌ಎಲ್ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್‌: ಕಳೆದ ಪಂದ್ಯದಲ್ಲಿ ಸಾಧಿಸಿದ ಗೆಲುವಿನಿಂದ ಹೊಸ ಹುರುಪು ಪಡೆದಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಎಸ್‌ಸಿ ಈಸ್ಟ್ ಬೆಂಗಾಲ್ ಸವಾಲು ಎದುರಿಸಲಿದೆ.

ಸತತ ಏಳು ಪಂದ್ಯಗಳಲ್ಲಿ ಗೆಲುವು ಕಾಣದಿದ್ದ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು, ಡಿಸೆಂಬರ್ 30ರಂದು ನಡೆದ ಹಣಾಹಣಿಯಲ್ಲಿ 4–2ರಿಂದ ಚೆನ್ನೈಯಿನ್ ಎಫ್‌ಸಿಗೆ ಸೋಲುಣಿಸಿತ್ತು.

ಕ್ಲೀಟನ್‌ ಸಿಲ್ವಾ, ಉದಾಂತ ಸಿಂಗ್‌ ಉತ್ತಮ ಲಯದಲ್ಲಿದ್ದಾರೆ. ಆಶಿಕ್ ಕುರುಣಿಯನ್‌, ಪರಾಗ್‌ ಶ್ರೀವಾಸ್‌, ರೋಶನ್ ನೋರೆಮ್‌ ಮತ್ತು ಅಜಿತ್ ಕಾಮರಾಜ್‌ ಕೂಡ ಭರವಸೆ ಮೂಡಿಸಿದ್ದಾರೆ.

ADVERTISEMENT

‘ಗೆಲುವು ತಂಡದಲ್ಲಿ ಹೊಸ ಶಕ್ತಿಯ ಹರಿವಿಗೆ ಕಾರಣವಾಗುತ್ತದೆ. ಕಳೆದ ಪಂದ್ಯದಲ್ಲಿ ಮೊದಲ ಎರಡು ಪೆನಾಲ್ಟಿ ಅವಕಾಶಗಳಲ್ಲಿ ವಿಫಲರಾದರೂ, ಕೊನೆಯ ಎರಡರಲ್ಲಿ ಯಶಸ್ಸು ಸಾಧಿಸಿದ್ದು ತಿರುವು ನೀಡಿತು. ಲಿಯೊನ್ ಅಗಸ್ಟಿನ್ ಮತ್ತು ಮುಸಾವು ಕಿಂಗ್‌ ಅವರು ಗಾಯದ ಹಿನ್ನೆಲೆಯಲ್ಲಿ ಬೆಂಗಾಲ್ ಎದುರಿನ ಪಂದ್ಯದಲ್ಲಿ ಆಡುತ್ತಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಸಾರ್ಥಕ್ ಗೋಲುಯಿ ಕೂಡ ಕಣಕ್ಕಿಳಿಯುವುದು ಸಂದೇಹ‘ ಎಂದು ಬಿಎಫ್‌ಸಿ ಕೋಚ್‌ ಮಾರ್ಕ್ ಪೆಜೌಲಿ ಹೇಳಿದ್ದಾರೆ.

ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕೆ ಈ ಪಂದ್ಯದಲ್ಲಿ ಗೆದ್ದು ಮುನ್ನಡೆಯುವ ಸುವರ್ಣಾವಕಾಶವಿದೆ.

ಎಂಟು ಪಂದ್ಯಗಳನ್ನು ಆಡಿರುವ ಬೆಂಗಾಲ್ ತಂಡವು ಟೂರ್ನಿಯಲ್ಲಿ ಇದುವರೆಗೆ ಒಂದೂ ಗೆಲುವು ಸಾಧಿಸದ ಏಕೈಕ ತಂಡವಾಗಿದೆ. ಈ ಪಂದ್ಯದಲ್ಲಿ ಚೆಟ್ರಿ ಪಡೆಗೆ ಆಘಾತ ನೀಡುವ ಛಲದಲ್ಲಿದೆ.

ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.