ADVERTISEMENT

ಇಂಗ್ಲೆಂಡ್‌ನ ಫುಟ್‌ಬಾಲ್‌ ದಿಗ್ಗಜ ಚಾರ್ಲ್‌ಟನ್‌ ನಿಧನ

ಏಜೆನ್ಸೀಸ್
Published 11 ಜುಲೈ 2020, 13:33 IST
Last Updated 11 ಜುಲೈ 2020, 13:33 IST
ಜಾಕ್‌ ಚಾರ್ಲ್‌ಟನ್‌ 
ಜಾಕ್‌ ಚಾರ್ಲ್‌ಟನ್‌    

ಲಂಡನ್‌: ಅಪೂರ್ವಆಟದ ಮೂಲಕ ಫುಟ್‌ಬಾಲ್‌ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ ಇಂಗ್ಲೆಂಡ್‌ನ ಹಿರಿಯ ಆಟಗಾರ ಜಾಕ್‌ ಚಾರ್ಲ್‌ಟನ್‌ (85) ಶನಿವಾರ ನಿಧನರಾದರು.

1935 ಮೇ 8ರಂದು ಆಷಿಂಗ್ಟನ್‌ನಲ್ಲಿ ಜನಿಸಿದಚಾರ್ಲ್‌ಟನ್ ಅವರು 1966ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಇಂಗ್ಲೆಂಡ್‌ ತಂಡದಲ್ಲಿ ಆಡಿದ್ದರು. 1965ರಿಂದ 1970ರ ಅವಧಿಯಲ್ಲಿ ಆಂಗ್ಲರ ನಾಡಿನ ಪರ 35 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು ಆರು ಗೋಲುಗಳನ್ನು ದಾಖಲಿಸಿದ್ದರು.

1952ರಿಂದ 1973ರವರೆಗೂ ಲೀಡ್ಸ್‌ ಯುನೈಟೆಡ್‌ ಕ್ಲಬ್‌ ಅನ್ನು ಪ್ರತಿನಿಧಿಸಿದ್ದ ಅವರು ಈ ಅವಧಿಯಲ್ಲಿ ಒಟ್ಟು 629 ಪಂದ್ಯಗಳನ್ನು ಆಡಿ 70 ಗೋಲುಗಳನ್ನು ದಾಖಲಿಸಿದ್ದರು. ಲೀಡ್ಸ್‌ ತಂಡವು ಮೊದಲ ಡಿವಿಷನ್‌, ಎರಡನೇ ಡಿವಿಷನ್‌, ಎಫ್‌ಎ ಕಪ್‌, ಲೀಗ್ ಕಪ್‌, ಚಾರಿಟಿ ಶೀಲ್ಡ್, ಇಂಟರ್‌ ಸಿಟಿ ಫೇರ್ಸ್‌ ಕಪ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸುವಲ್ಲಿ ಚಾರ್ಲ್‌ಟನ್‌ ಅವರ ಪಾತ್ರ ನಿರ್ಣಾಯಕವಾಗಿತ್ತು.

ADVERTISEMENT

ಫುಟ್‌ಬಾಲ್‌ ಬದುಕಿಗೆ ವಿದಾಯ ಹೇಳಿದ ಬಳಿಕ ಅವರು ಮಿಡಲ್‌ಬರೊ, ನ್ಯೂ ಕ್ಯಾಸ್ಟಲ್‌ ಯುನೈಟೆಡ್‌ ಮತ್ತು ಶೆಫೀಲ್ಡ್‌ ವೆಡ್ನೆಸ್‌ಡೇ ಕ್ಲಬ್‌ಗಳ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದರು.

1986ರಿಂದ 1996ರವರೆಗೆ ಐರ್ಲೆಂಡ್‌ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.ಚಾರ್ಲ್‌ಟನ್ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಐರ್ಲೆಂಡ್‌ ತಂಡವು 1990ರ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿ ಆತಿಥೇಯ ಇಟಲಿ ಎದುರು ಸೋತಿತ್ತು. 1994ರ ವಿಶ್ವಕಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟು ಗಮನ ಸೆಳೆದಿತ್ತು. 1988ರ ಯುರೊ ಕಪ್‌ನಲ್ಲಿ ಇಂಗ್ಲೆಂಡ್‌ ಎದುರು ಸ್ಮರಣೀಯ ಗೆಲುವು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.