ADVERTISEMENT

ಫುಟ್‌ಬಾಲ್: ಎಎಸ್‌ಸಿ–ಸೆಂಟರ್‌ಗೆ ಭಾರಿ ಜಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 18:58 IST
Last Updated 22 ನವೆಂಬರ್ 2019, 18:58 IST
ಎಎಸ್‌ಸಿ ಆ್ಯಂಡ್ ಸೆಂಟರ್ ತಂಡದ ಜೋತಿನ್ ಸಿಂಗ್ ಚೆಂಡಿನೊಂದಿಗೆ ಮುನ್ನುಗ್ಗಿದ ಸಂದರ್ಭ –ಪ್ರಜಾವಾಣಿ ಚಿತ್ರ
ಎಎಸ್‌ಸಿ ಆ್ಯಂಡ್ ಸೆಂಟರ್ ತಂಡದ ಜೋತಿನ್ ಸಿಂಗ್ ಚೆಂಡಿನೊಂದಿಗೆ ಮುನ್ನುಗ್ಗಿದ ಸಂದರ್ಭ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜೋತಿನ್ ಸಿಂಗ್ 2 ಗೋಲು ಗಳಿಸಿ ಮಿಂಚಿದರು. ಇದರ ಬಲದಿಂದ ಎಎಸ್‌ಸಿ ಆ್ಯಂಡ್ ಸೆಂಟರ್ ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ 5–0 ಅಂತರದ ಗೆಲುವು ಸಾಧಿಸಿತು.

ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ನಡೆದ ಎಜಿಒಆರ್‌ಸಿ ಎಫ್‌ಸಿ ಎದುರಿನ ಪಂದ್ಯದ ಪೂರ್ತಿ ಎಎಸ್‌ಸಿ ಆ್ಯಂಡ್ ಸೆಂಟರ್ ಆಧಿಪತ್ಯ ಸ್ಥಾಪಿಸಿತ್ತು. ರಕ್ಷಣಾ ವಿಭಾಗದ ಸಮರ್ಥ ಆಟಕ್ಕೆ ಬೆದರಿದ ಎದುರಾಳಿ ತಂಡಕ್ಕೆ ಒಮ್ಮೆಯೂ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

20ನೇ ನಿಮಿಷದಲ್ಲಿ ಎಂ.ತ್ಯಾಗರಾಜ ಅವರನ್ನು ಮಂಜು ನಂಜನಗೂಡು ಎದುರಾಳಿಗಳ ಆವರಣದಲ್ಲಿ ನೆಲಕ್ಕೆ ಬೀಳಿಸಿದರು. ರೆಫರಿ ಪೆನಾಲ್ಟಿ ನೀಡಿದರು. ಅವಕಾಶವನ್ನು ಸದುಪಯೋಗ ಮಾಡಿಕೊಂಡ ಜೋತಿನ್ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 24ನೇ ನಿಮಿಷದಲ್ಲಿ ದೀಪಕ್ ಪಂತ್ ನೀಡಿದ ಮೋಹಕ ಕ್ರಾಸ್‌ನಲ್ಲಿ ತ್ಯಾಗರಾಜನ್ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. 47ನೇ ನಿಮಿಷದಲ್ಲಿ ಜೋತಿನ್ ಮತ್ತೊಮ್ಮೆ ಕಾಲ್ಚಳಕ ತೋರಿಸಿದರು. 81ನೇ ನಿಮಿಷದಲ್ಲಿ ಶರತ್ ಕುಮಾರ್ ಮತ್ತು 88ನೇ ನಿಮಿಷದಲ್ಲಿ ದೀಪಕ್ ಸಿಂಗ್‌ ಗಳಿಸಿದ ಗೋಲುಗಳು ತಂಡದ ಜಯದ ಅಂತರವನ್ನು ಮತ್ತಷ್ಟು ಹೆಚ್ಚಿಸಿತು.

ADVERTISEMENT

ಸೂಪರ್ ಡಿವಿಷನ್‌ನ ಮತ್ತೊಂದು ಪಂದ್ಯದಲ್ಲಿ ಕಿಕ್‌ಸ್ಟಾರ್ಟ್‌ ಎಫ್‌ಸಿ 4–0ಯಿಂದ ಎಡಿಇ ಎಫ್‌ಸಿಯನ್ನು ಮಣಿಸಿತು. ಸೋಲೆಮಲೈ (15ನೇ ನಿಮಿಷ), ಅಭಿಲಾಷ್‌ (26), ವೋಚ್‌ ಇಮ್ಯಾನ್ಯುಯೆಲ್ (51) ಮತ್ತು ಸುಧೀರ್ ಕೋಟಿಕೇಳಾ (55) ಗೋಲು ಗಳಿಸಿದರು.

‘ಎ’ ಡಿವಿಷನ್‌ ಪಂದ್ಯದಲ್ಲಿ ಪೋಸ್ಟಲ್ ಡಿಪಾರ್ಟ್‌ಮೆಂಟ್ ಎಫ್‌ಸಿ 2–1ರಲ್ಲಿ ಬಿಯುಎಫ್‌ಸಿಯನ್ನು ಸೋಲಿಸಿತು. ಪೋಸ್ಟಲ್ ಪರ ಅರವಿಂದ್ (67) ಮತ್ತು ಕೌಶಿಕ್ (70) ಗೋಲು ಗಳಿಸಿದರೆ ಬಿಯುಎಫ್‌ಸಿಗಾಗಿ ಕೀತಾ (30) ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.