ADVERTISEMENT

ಕೆಎಸ್‌ಎಫ್‌ಎ ಮಹಿಳಾ ಫುಟ್‌ಬಾಲ್‌ ಲೀಗ್‌: ಕಿಕ್‌ಸ್ಟಾರ್ಟ್‌ ಎಫ್‌ಸಿ ಚಾಂಪಿಯನ್

ಮಿಸಾಕ ಯುನೈಟೆಡ್‌ ಎಫ್‌ಸಿ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 16:47 IST
Last Updated 17 ಜನವರಿ 2022, 16:47 IST
ಕಿಕ್‌ಸ್ಟಾರ್ಟ್‌ ಎಫ್‌ಸಿಯ ಆರುಷಿ ಸಂತೋಷ್‌ (ಎಡ) ಮತ್ತು ಮಾತೃಪ್ರತಿಷ್ಠಾನದ ಖುಷ್ಬೂ ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ
ಕಿಕ್‌ಸ್ಟಾರ್ಟ್‌ ಎಫ್‌ಸಿಯ ಆರುಷಿ ಸಂತೋಷ್‌ (ಎಡ) ಮತ್ತು ಮಾತೃಪ್ರತಿಷ್ಠಾನದ ಖುಷ್ಬೂ ಚೆಂಡಿಗಾಗಿ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಟೂರ್ನಿಯುದ್ದಕ್ಕೂ ಅಮೋಘ ಸಾಮರ್ಥ್ಯ ತೋರುತ್ತ ಬಂದಿರುವ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ರಾಜ್ಯ ಮಹಿಳಾ ಲೀಗ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಿಸಾಕ ಯುನೈಟೆಡ್ ಎಫ್‌ಸಿ ರನ್ನರ್ ಅಪ್‌ ಆಯಿತು.

ಸೋಮವಾರ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಮಾತೃ ಪ್ರತಿಷ್ಠಾನ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಕಿಕ್‌ಸ್ಟಾರ್ಟ್‌ 5–1ಯಿಂದ ಗೆಲುವು ದಾಖಲಿಸಿತು. ಕಿಕ್‌ಸ್ಟಾರ್ಟ್‌ಗಾಗಿ ಕಾವ್ಯ (3 ಮತ್ತು 26ನೇ ನಿಮಿಷ), ಸುಷ್ಮಿತ ಲೇಪ್ಚ (27ನೇ ನಿ), ಆರುಷಿ ಸಂತೋಷ್ (45+1) ಮತ್ತು ಫನ್ಜೊ ನಿರ್ಮಲಾ ದೇವಿ (68ನೇ ನಿ) ಗೋಲು ಗಳಿಸಿದರೆ ಎದುರಾಳಿ ತಂಡದ ಸಮಾಧಾನಕರ ಗೋಲು ಅಂಕುಶ್‌ (73ನೇ ನಿ) ಅರಿಂದ ಮೂಡಿ ಬಂತು.

ADVERTISEMENT

ದಿನದ ಮತ್ತೊಂದು ಪಂದ್ಯದಲ್ಲಿ ಮಿಸಾಕ ಯುನೈಟೆಡ್‌ ಎಫ್‌ಸಿ 2–0ಯಿಂದ ಪರಿಕ್ರಮ ಎಫ್‌ಸಿಯನ್ನು ಮಣಿಸಿತು. ಲಾಲ್‌ತಾನ್ ಸಾಂಗಿ (32ನೇ ನಿ) ಮತ್ತು ಲಾಲ್‌ ನಿಯಾಕ್‌ ಡಿಕಿ (67ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ಬೆಂಗಳೂರು ಯುನೈಟೆಡ್‌ ಎಫ್‌ಸಿ ಮತ್ತು ಬೆಂಗಳೂರು ಬ್ರೇವ್ಸ್‌ 3–3ರಲ್ಲಿ ಡ್ರಾ ಸಾಧಿಸಿದವು. ಯುನೈಟೆಡ್ ಪರ ಹುದೈನಾ (21ನೇ ನಿ), ಶೋಭನಾ (72ನೇ ನಿ) ಮತ್ತು ಸುನಾಲಿಂಡಾ (83ನೇ ನಿ) ಗೋಲು ಗಳಿಸಿದರು. ಬ್ರೇವ್ಸ್‌ಗಾಗಿ ಸೈನಿ (10, 20ನೇ ನಿ) ಮತ್ತು ಮಾಳವಿಕ (38ನೇ ನಿ) ಗೋಲು ದಾಖಲಿಸಿದರು.

ಟ್ರೋಫಿಗಾಗಿ ಕಾದಾಟ

ಚಾಂಪಿಯನ್‌ಷಿಪ್‌ ಮತ್ತು ರನ್ನರ್ ಅಪ್ ನಿರ್ಧಾರವಾದರೂ ಟ್ರೋಫಿಗಾಗಿ ಉಭಯ ತಂಡಗಳು ಎರಡು ಲೆಗ್‌ಗಳಲ್ಲಿ ಪೈಪೋಟಿ ನಡೆಸಲಿವೆ. ಇದೇ 21ರಂದು ಮೊದಲ ಲೆಗ್‌ ಮತ್ತು 24ರಂದು ಎರಡನೇ ಲೆಗ್‌ ಪಂದ್ಯ ನಡೆಯಲಿದೆ. ಎರಡೂ ಲೆಗ್‌ಗಳಲ್ಲಿ ಉತ್ತಮ ಸಾಧನೆ ಮಾಡುವ ತಂಡಕ್ಕೆ ಟ್ರೋಫಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.