ADVERTISEMENT

ಕಿಂಗ್ಸ್‌ ಕಪ್‌ | ಇರಾಕ್ ವಿರುದ್ಧ ಪಂದ್ಯ ಇಂದು; ಚೆಟ್ರಿಯಿಲ್ಲದೇ ಆಡಲಿರುವ ಭಾರತ

ಪಿಟಿಐ
Published 6 ಸೆಪ್ಟೆಂಬರ್ 2023, 21:50 IST
Last Updated 6 ಸೆಪ್ಟೆಂಬರ್ 2023, 21:50 IST
<div class="paragraphs"><p>ಸುನಿಲ್‌ ಚೆಟ್ರಿ </p></div>

ಸುನಿಲ್‌ ಚೆಟ್ರಿ

   

ಚಿಯಾಂಗ್ ಮೈ (ಥಾಯ್ಲೆಂಡ್‌): ಭಾರತ ತಂಡದವರು ನಾಲ್ಕು ರಾಷ್ಟ್ರಗಳ ಕಿಂಗ್ಸ್‌ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ತಮ್ಮ ಮೊದಲ ಪಂದ್ಯವನ್ನು ಇರಾಕ್ ವಿರುದ್ಧ ಆಡಲಿದ್ದಾರೆ. ತಂಡದ ಆಧಾರಸ್ತಂಭವಾಗಿರುವ ಸುನಿಲ್ ಚೆಟ್ರಿ ಅವರ ಅನುಪಸ್ಥಿತಿಯು ಈ ಟೂರ್ನಿಯಲ್ಲಿ ಭಾರತವನ್ನು ಕಾಡುವ ಸಾಧ್ಯತೆಯಿದೆ.

ಇಂಟರ್‌ಕಾಂಟಿನೆಂಟಲ್ ಕಪ್ ಮತ್ತು ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗೆಲುವಿನಲ್ಲಿ ಈ ಅನುಭವಿ ಆಟಗಾರ ಪ್ರಮುಖ ಪಾತ್ರ ವಹಿಸಿದ್ದರು. ಗಂಡುಮಗುವಿನ ತಂದೆಯಾಗಿರುವ ಅವರು ಆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಈ ಟೂರ್ನಿಗೆ ವಿರಾಮ ಪಡೆದಿದ್ದಾರೆ. ಮೂರು ಟೂರ್ನಿಗಳ ಗೆಲುವಿನ ನಂತರ ಇಗರ್‌ ಸ್ಟಿಮಾಚ್ ತರಬೇತಿಯ ತಂಡ ಮೊದಲ ಬಾರಿ ಕಣಕ್ಕಿಳಿಯಲಿದೆ.

ADVERTISEMENT

ಆದರೆ ಇರಾಕ್‌ ತಂಡವೂ ಪ್ರಬಲವಾಗಿದೆ. ಫಿಫಾ ವಿಶ್ವ ಕ್ರಮಾಂಕದಲ್ಲಿ ಭಾರತಕ್ಕಿಂತ 29 ಸ್ಥಾನಗಳಷ್ಟು ಮೇಲಿರುವ ಇರಾಕ್, ಇತ್ತೀಚೆಗಷ್ಟೇ ಅರೇಬಿಯನ್ ಗಲ್ಫ್‌ ಕಪ್ ಗೆದ್ದುಕೊಂಡಿದ್ದು ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಇರಾಕ್‌ ವಿರುದ್ಧ ಭಾರತ ಆರು ಪಂದ್ಯಗಳನ್ನು ಆಡಿದ್ದು, ಒಮ್ಮೆಯೂ ಗೆದ್ದಿಲ್ಲ. ನಾಲ್ಕು ಬಾರಿ ಸೋತಿದ್ದು, ಎರಡು ಪಂದ್ಯಗಳು ಡ್ರಾ ಆಗಿವೆ. ಕೊನೆಯ ಬಾರಿ ಷಾರ್ಜಾದಲ್ಲಿ ನಡೆದ ‘ಫ್ರೆಂಡ್ಲಿ’ಯಲ್ಲಿ ಇರಾಕ್‌ 2–0ಯಿಂದ ಜಯಗಳಿಸಿತ್ತು.

2 ರೌಂಡ್‌ರಾಬಿನ್ ಪಂದ್ಯಗಳ ನಂತರ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ನಲ್ಲಿ ಆಡಲಿವೆ. ಆತಿಥೇಯ ಥಾಯ್ಲೆಂಡ್ ತಂಡ ದಿನದ ಎರಡನೇ ಪಂದ್ಯದಲ್ಲಿ ಲೆಬನಾನ್ ವಿರುದ್ಧ ಆಡಲಿದೆ. ಸೋತ ಎರಡು ತಂಡಗಳು ಕಂಚಿನ ಪದಕಕ್ಕೆ ಪೈಪೋಟಿ ನಡೆಸಲಿವೆ. ಭಾನುವಾರ ಫೈನಲ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.