ADVERTISEMENT

ಫುಟ್‌ಬಾಲ್ ಟೂರ್ನಿ: ವಿಲಾರಿಯಲ್ ಸವಾಲು ಮೀರಿದ ಲಿವರ್‌ಪೂಲ್‌ ಫೈನಲ್‌ಗೆ

ಯುಇಎಫ್‌ಎ ಚಾಂಪಿಯನ್ಸ್ ಲೀಗ್

ಏಜೆನ್ಸೀಸ್
Published 4 ಮೇ 2022, 13:12 IST
Last Updated 4 ಮೇ 2022, 13:12 IST
ಗೋಲು ಗಳಿಸಿದ ಲಿವರ್‌ಪೂಲ್‌ ತಂಡದ ಫ್ಯಾಬಿನೊ (ಎಡದಿಂದ ಮೂರನೆಯವರು) ಅವರು ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಎಎಫ್‌ಪಿ ಚಿತ್ರ
ಗೋಲು ಗಳಿಸಿದ ಲಿವರ್‌ಪೂಲ್‌ ತಂಡದ ಫ್ಯಾಬಿನೊ (ಎಡದಿಂದ ಮೂರನೆಯವರು) ಅವರು ಸಹ ಆಟಗಾರರೊಂದಿಗೆ ಸಂಭ್ರಮಿಸಿದರು– ಎಎಫ್‌ಪಿ ಚಿತ್ರ   

ವಿಲಾರಿಯಲ್, ಸ್ಪೇನ್‌: ಫ್ಯಾಬಿನೊ, ಲೂಯಿಸ್ ಡಿಯಾಜ್‌ ಮತ್ತು ಸ್ಯಾಡಿಯೊ ಮಾನೆ ಅವರ ಸಾಹಸದ ನೆರವಿನಿಂದ ಲಿವರ್‌ಪೂಲ್ ತಂಡವು ಚಾಂಪಿಯನ್ಸ್ ಲೀಗ್‌ ಫುಟ್‌ಬಾಲ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಮಂಗಳವಾರ ರಾತ್ರಿ ನಡೆದ ಟೂರ್ನಿಯ ಸೆಮಿಫೈನಲ್‌ ಎರಡನೇ ಲೆಗ್‌ನಲ್ಲಿ ಲಿವರ್‌‍ಪೂಲ್ 3–2ರಿಂದ ವಿಲಾರಿಯಲ್‌ಗೆ ಸೋಲುಣಿಸಿತು. ಇದರೊಂದಿಗೆ 5–2ರ ಸರಾಸರಿ ಆಧಾರದಲ್ಲಿ ಪ್ರಶಸ್ತಿ ಸುತ್ತು ತಲು‍ಪಿತು. ನಾಲ್ಕರ ಘಟ್ಟದ ಮೊದಲ ಲೆಗ್‌ನಲ್ಲಿ ಲಿವರ್‌ಪೂಲ್‌ 2–0ಯಿಂದ ಜಯ ಸಾಧಿಸಿತ್ತು.

ಈಸ್ಟಾಡಿಯೊ ಡಿ ಲಾ ಸೆರಾಮಿಕಾ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ವಿಲಾರಿಯಲ್‌ಗೆ ಆರಂಭದಲ್ಲೇ ಮುನ್ನಡೆ ಲಭಿಸಿತು. ಮೂರನೇ ನಿಮಿಷದಲ್ಲಿ ಬೌಲಾಯೆ ಡಿಯಾ ಗಳಿಸಿದ ಗೋಲು ತಂಡದ ಆಸೆಯನ್ನು ಚಿಗುರಿಸಿತು. ಫ್ರಾನ್ಸಿಸ್‌ ಕಾಕ್ವೆಲಿನ್‌ 41ನೇ ನಿಮಿಷದಲ್ಲಿ ತೋರಿದ ಕಾಲ್ಚಳಕದ ಬಲದಿಂದ ತಂಡವು ಮುನ್ನಡೆಯನ್ನು 2–0ಗೆ ಹೆಚ್ಚಿಸಿಕೊಂಡಿತು.

ADVERTISEMENT

ಆದರೆ ದ್ವಿತೀಯಾರ್ಧದಲ್ಲಿ ಲಿವರ್‌ಪೂಲ್ ಪಾರಮ್ಯ ಮೆರೆಯಿತು. 12 ನಿಮಿಷಗಳ ಅಂತರದಲ್ಲಿ ಮೂರು ಬಾರಿ ಚೆಂಡನ್ನು ಗುರಿ ಸೇರಿಸಿದ ಆಟಗಾರರುತಂಡದ ಗೆಲುವನ್ನು ಖಚಿತಪಡಿಸಿದರು. 62ನೇ ನಿಮಿಷದಲ್ಲಿ ಫ್ಯಾಬಿಯಾನೊ, ಲೂಯಿಸ್‌ ಡಿಯಾಜ್‌ 67ನೇ ನಿಮಿಷದಲ್ಲಿ ಲಿವರ್‌ಪೂಲ್ ಪರ ಯಶಸ್ಸು ಸಾಧಿಸಿದರೆ, 74ನೇ ನಿಮಿಷದಲ್ಲಿ ಸ್ಯಾಡಿಯೊ ಮಾನೆ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಲಿವರ್‌ಪೂಲ್ ತಂಡವು ಫೈನಲ್‌ನಲ್ಲಿ, ರಿಯಲ್ ಮ್ಯಾಡ್ರಿಡ್‌ ಮತ್ತು ಮ್ಯಾಂಚೆಸ್ಟರ್‌ ಸಿಟಿ ನಡುವಣ ಸೆಮಿಫೈನಲ್‌ ಪಂದ್ಯದ ವಿಜೇತರನ್ನು ಎದುರಿಸಲಿದೆ. ಮೇ 29ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.