
ಕೋಲ್ಕತ್ತದಲ್ಲಿ ನಿರ್ಮಿಸಲಾದ 70 ಅಡಿ ಎತ್ತರದ ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಪ್ರತಿಮೆ –
ಪಿಟಿಐ ಚಿತ್ರ
ಕೋಲ್ಕತ್ತ: ಫುಟ್‌ಬಾಲ್ ದಂತಕತೆ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಶನಿವಾರ ಆರಂಭವಾಗಲಿದೆ.
‘ಗೋಟ್ (GOAT - Greatest Of All Time) ಟೂರ್ ಆಫ್ ಇಂಡಿಯಾ 2025’ ಕಾರ್ಯಕ್ರಮದ ಅಂಗವಾಗಿ ಮೆನ್ಸಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸದಲ್ಲಿ ಅವರು ನಾಲ್ಕು ನಗರಗಳಿಗೆ (ಕೋಲ್ಕತ್ತ, ಅಹಮದಾಬಾದ್, ಮುಂಬೈ ಮತ್ತು ನವದೆಹಲಿ) ಭೇಟಿ ನೀಡುವರು. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಭೇಟಿಯೊಂದಿಗೆ 38 ವರ್ಷದ ಸೂಪರ್ ಸ್ಟಾರ್ ಆಟಗಾರನ ಭಾರತ ಪ್ರವಾಸ ಮುಕ್ತಾಯವಾಗಲಿದೆ.
ಕೋಲ್ಕತ್ತದಲ್ಲಿ ನಿರ್ಮಿಸಲಾಗಿರುವ ತಮ್ಮ 70 ಅಡಿ ಎತ್ತರದ ಪ್ರತಿಮೆಯನ್ನು ಶನಿವಾರ ಬೆಳಿಗ್ಗೆ ಮೆಸ್ಸಿ ಅವರು ವರ್ಚುವಲ್ ಮೂಲಕ ಅನಾವರಣ ಮಾಡುವರು. ಭದ್ರತಾ ಕಾರಣದಿಂದಾಗಿ ಅವರು ಖುದ್ದಾಗಿ ಹಾಜರಾಗುತ್ತಿಲ್ಲ.
ಎಂಟು ಬಾರಿ ಬ್ಯಾಲನ್ ಡಿ’ ಓರ್ ಪ್ರಶಸ್ತಿ ವಿಜೇತ ಮೆಸ್ಸಿ ಅವರು ಕೋಲ್ಕತ್ತದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಅವರು ಸೌಹಾರ್ದ ಪಂದ್ಯವನ್ನು ಆಡಲಿದ್ದಾರೆ.
ಸಂಜೆ ಹೈದರಾಬಾದ್‌ಗೆ ತೆರಳಲಿರುವ ಮೆಸ್ಸಿ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮತ್ತೊಂದು ಸೌಹಾರ್ದ ಪಂದ್ಯವನ್ನು ಆಡುವರು. ಈ ಪಂದ್ಯದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೂ ಕಣಕ್ಕಿಳಿಯಲಿದ್ದಾರೆ.
ಭಾನುವಾರ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಯುವ ಸಹಾಯಾರ್ಥ ಪಂದ್ಯದಲ್ಲಿ ಮೆಸ್ಸಿ ಭಾಗವಹಿಸುವರು. ಬಳಿಕ ಸತ್ಕಾರ್ಯದ ಉದ್ದೇಶದಿಂದ ಹಮ್ಮಿಕೊಂಡಿರುವ ಫ್ಯಾಷನ್ ಶೋದಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವರು. ಸೋಮವಾರ ಅವರು ದೆಹಲಿಗೆ ಭೇಟಿ ನೀಡುವರು.
‘ಭಾರತ ನನಗೆ ಬಹಳ ವಿಶೇಷವಾದ ದೇಶ. 14 ವರ್ಷಗಳ ಹಿಂದೆ ಅಲ್ಲಿ ಕಳೆದ ಅಮೂಲ್ಯ ಕ್ಷಣಗಳು ನನ್ನ ನೆನಪಿನಲ್ಲಿವೆ. ಅದ್ಭುತವಾದ ಅಭಿಮಾನಿಗಳನ್ನು ನೋಡಿದ್ದೆ’ ಎಂದು ಮೆಸ್ಸಿ ಪ್ರವಾಸ ಆರಂಭಕ್ಕೂ ಮುನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಭಾರತವು ಉತ್ಸಾಹಭರಿತ ಫುಟ್‌ಬಾಲ್ ರಾಷ್ಟ್ರವಾಗಿದ್ದು, ಫುಟ್‌ಬಾಲ್ ಆಟದ ಬಗ್ಗೆ ನನಗಿರುವ ಪ್ರೀತಿಯನ್ನು ಹಂಚಿಕೊಳ್ಳಲು ಹೊಸ ಪೀಳಿಗೆಯ ಅಭಿಮಾನಿಗಳನ್ನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಲಯೊನೆಲ್ ಮೆಸ್ಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.