ADVERTISEMENT

Durand Cup: ಈಸ್ಟ್‌ ಬೆಂಗಾಲ್‌ ಮಣಿಸಿದ ಮೋಹನ್‌ ಬಾಗನ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 15:23 IST
Last Updated 3 ಸೆಪ್ಟೆಂಬರ್ 2023, 15:23 IST
<div class="paragraphs"><p>ಡುರಾಂಡ್‌ ಕಪ್‌ ಗೆದ್ದುಕೊಂಡ ಮೋಹನ್‌ ಬಾಗನ್‌ ತಂಡದ ಆಟಗಾರರ ಸಂಭ್ರಮ </p></div>

ಡುರಾಂಡ್‌ ಕಪ್‌ ಗೆದ್ದುಕೊಂಡ ಮೋಹನ್‌ ಬಾಗನ್‌ ತಂಡದ ಆಟಗಾರರ ಸಂಭ್ರಮ

   

–ಪಿಟಿಐ ಚಿತ್ರ

ಕೋಲ್ಕತ್ತ: ದಿಮಿತ್ರಿ ಪೆಟ್ರಾಟೊಸ್‌ ತಂದಿತ್ತ ಗೋಲಿನ ನೆರವಿನಿಂದ ಈಸ್ಟ್‌ ಬೆಂಗಾಲ್‌ ತಂಡವನ್ನು 1–0 ಯಿಂದ ಮಣಿಸಿದ ಮೋಹನ್‌ ಬಾಗನ್ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.

ADVERTISEMENT

17ನೇ ಬಾರಿ ಡುರಾಂಡ್‌ ಕಪ್‌ ಗೆದ್ದುಕೊಂಡಿರುವ ಬಾಗನ್‌, 23 ವರ್ಷಗಳ ಪ್ರಶಸ್ತಿ ಬರ ನೀಗಿಸಿದೆ. ಕೋಲ್ಕತ್ತದ ತಂಡ 2000 ದಲ್ಲಿ ಕೊನೆಯದಾಗಿ ಚಾಂಪಿಯನ್ ಆಗಿತ್ತು. ಆ ವರ್ಷ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಮಹೀಂದ್ರಾ ಯುನೈಟೆಡ್‌ ತಂಡವನ್ನು ಸೋಲಿಸಿತ್ತು.

ಕೋಲ್ಕತ್ತದ ಎರಡು ‘ಬದ್ಧ ಎದುರಾಳಿ’ಗಳ ನಡುವಣ ಫೈನಲ್‌ ಪಂದ್ಯ ರೋಚಕತೆಯಿಂದ ಕೂಡಿತ್ತು. 62ನೇ ನಿಮಿಷದಲ್ಲಿ ಬಾಗನ್‌ ತಂಡದ ಅನಿರುದ್ಧ್‌ ಥಾಪಾ ಕೆಂಪು ಕಾರ್ಡ್‌ ಪಡೆದು ಹೊರನಡೆದರು. ಆ ಬಳಿಕ 10 ಮಂದಿಯೊಂದಿಗೆ ಆಡಿದರೂ, ಗೆಲುವು ಸಾಧಿಸುವಲ್ಲಿ ಯಶ ಕಂಡಿತು.

ಪೆಟ್ರಾಟೊಸ್‌ ಅವರು 71ನೇ ನಿಮಿಷದಲ್ಲಿ ಗೆಲುವಿನ ಗೋಲು ತಂದಿತ್ತರು. ಆಸ್ಟ್ರೇಲಿಯಾದ ಈ ಆಟಗಾರ ಆಕರ್ಷಕ ಡ್ರಿಬ್ಲಿಂಗ್‌ ಮೂಲಕ ಎದುರಾಳಿ ಡಿಫೆಂಡರ್‌ಗಳನ್ನು ತಪ್ಪಿಸಿ, ಸುಮಾರು 25 ಯಾರ್ಡ್‌ ದೂರದಿಂದ ಬಿರುಸಿನಿಂದ ಒದ್ದ ಚೆಂಡು ಗುರಿ ಸೇರಿತು. ಚೆಂಡಿನ ವೇಗ ಎಷ್ಟಿತ್ತೆಂದರೆ ಈಸ್ಟ್‌ ಬೆಂಗಾಲ್‌ ತಂಡದ ಗೋಲ್‌ಕೀಪರ್‌ ಪ್ರಭ್‌ಸುಖನ್‌ ಸಿಂಗ್‌ ಗಿಲ್‌ ಅವರು ಪ್ರೇಕ್ಷಕನಂತೆ ನಿಂತುಬಿಟ್ಟರು.

ಈಸ್ಟ್‌ ಬೆಂಗಾಲ್‌ ತಂಡದ ಕೋಚ್‌ ಕಾರ್ಲೆಸ್ ಕ್ವದ್ರತ್‌ ಅವರು ಕೊನೆಯ 10 ನಿಮಿಷಗಳಲ್ಲಿ ಆಕ್ರಮಣದ ವೇಗ ಹೆಚ್ಚಿಸಲು ಮೂರು ಬದಲಾವಣೆಗಳನ್ನು ಮಾಡಿ ನಿಶು ಕುಮಾರ್, ವಿ.ಪಿ.ಸುಹೈರ್‌ ಮತ್ತು ಎಡ್ವಿನ್‌ ವನ್ಸ್‌ಪಾಲ್‌ ಅವರನ್ನು ಕಣಕ್ಕಿಳಿಸಿದರು.

ಇದಕ್ಕೆ ಪ್ರತಿತಂತ್ರ ರೂಪಿಸಿದ ಬಾಗನ್‌ ಕೋಚ್ ಯುವಾನ್ ಫೆರಾಂಡೊ, ರಕ್ಷಣಾ ವಿಭಾಗದಲ್ಲಿ ಎಂಟು ಆಟಗಾರರನ್ನು ನಿಯೋಜಿಸಿದರು. ಸೆಂಟರ್‌ ಬ್ಯಾಕ್‌ ಆಟಗಾರ ಅನ್ವರ್‌ ಅಲಿ ರಕ್ಷಣಾ ವಿಭಾಗದಲ್ಲಿ ಮಿಂಚಿದರು.

ಬಾಗನ್‌ ತಂಡ 2004ರ ಟೂರ್ನಿಯ ಫೈನಲ್‌ನಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು. ಆ ವರ್ಷ ಈಸ್ಟ್‌ ಬೆಂಗಾಲ್‌ ಎದುರು 1–2 ಗೊಲುಗಳಿಂದ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.