ಫುಟ್‌ಬಾಲ್
ಕೋಲ್ಕತ್ತ: ಈಗಾಗಲೇ ಆರಂಭವಾಗಿರುವ ರಾಷ್ಟ್ರೀಯ ಶಿಬಿರಕ್ಕೆ ತನ್ನ ಆಟಗಾರರನ್ನು ಬಿಟ್ಟುಕೊಡಲು ಐಎಸ್‌ಎಲ್ ಚಾಂಪಿಯನ್ ಮೋಹನ್ ಬಾಗನ್ ತಂಡ ಸೋಮವಾರ ನಿರಾಕರಿಸಿದೆ. ಇದೇ ವೇಳೆ, ಆಟಗಾರರ ಹಿತಾಸಕ್ತಿಯನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಕಡೆಗಣಿಸುತ್ತಿದೆ ಎಂದೂ ಕೋಲ್ಕತ್ತದ ಕ್ಲಬ್ ದೂಷಿಸಿದೆ.
ಮುಂದಿನ ತಿಂಗಳ ಸಿಎಎಫ್‌ಎ ನೇಷನ್ಸ್ ಕಪ್‌ಗೆ ಸಜ್ಜಾಗಲು ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಸಿದ್ಧತಾ ಶಿಬಿರ ಆರಂಭವಾಗಿದೆ. ಆದರೆ ಮೋಹನ್ ಬಾಗನ್‌ನ ಏಳು ಆಟಗಾರರು ಸೇರಿದಂತೆ 13 ಆಟಗಾರರು ಶಿಬಿರಕ್ಕೆ ಇನ್ನೂ ಸೇರ್ಪಡೆಗೊಂಡಿಲ್ಲ.
ಈ ಮೊದಲು ಡ್ಯುರಾಂಡ್ ಕಪ್ ಟೂರ್ನಿಯ ಕಾರಣ ಕ್ಲಬ್‌ಗಳು ಆಟಗಾರರನ್ನು ಕಳುಹಿಸಿರಲಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಭಾನುವಾರ ಡುರಾಂಡ್ ಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಈಸ್ಟ್ ಬೆಂಗಾಲ್‌ಗೆ 1–2 ರಿಂದ ಸೋತ ಬಳಿಕವೂ ಬಾಗನ್ ತನ್ನ ಆಟಗಾರರನ್ನು ಕಳುಹಿಸಲು ಹಿಂದೇಟು ಹಾಕಿದೆ.
ಸೆಪ್ಟೆಂಬರ್ 16ರಂದು ಸಾಲ್ಟ್‌ಲೇಕ್‌ನಲ್ಲಿ ತುರ್ಕಮೆನಿಸ್ತಾನದ ಅಹಲ್ ಎಫ್‌ಸಿ ವಿರುದ್ಧ ನಡೆಯಲಿರುವ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಎರಡನೇ ಸ್ಥರದ ಟೂರ್ನಿಯಲ್ಲಿ ತಂಡ ಆಡಲು ಸಜ್ಜಾಗುತ್ತಿದ್ದೇವೆ ಎಂದು ಕ್ಲಬ್ ಹೇಳಿದೆ.
‘ಪ್ರತಿ ಸಲ ಅವರು ನಮ್ಮ ತಂಡದ ಕೆಲವು ಆಟಗಾರರನ್ನು ಸೇರಿಸಿಕೊಳ್ಳುತ್ತಾರೆ. ಅವರಲ್ಲಿ 2–3 ಮಂದಿ ಗಾಯಾಳಾಗಿ ಮರಳುತ್ತಾರೆ. ನಂತರ ಫೆಡರೇಷನ್ ಅವರನ್ನು ವಿಚಾರಿಸುವುದೇ ಇಲ್ಲ’ ಎಂದು ಬಾಗನ್ ತಂಡದ ಅಧಿಕಾರಿಯೊಬ್ಬರು ಎಐಎಫ್‌ಎಫ್ ವಿರುದ್ಧ ಕಿಡಿಕಾರಿದರು.
‘ನಾಯಕ ಸುಭಾಷಿಶ್ ಬೋಸ್ ಅವರು ಬಾಂಗ್ಲಾದೇಶ ವಿರುದ್ಧ ಏಷ್ಯನ್ ಕಪ್ ಕ್ವಾಲಿಫೈಯರ್ಸ್ ಪಂದ್ಯದ ವೇಳೆ ಗಾಯಗೊಂಡಿದ್ದರು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಇಡೀ ಋತುವಿನಲ್ಲಿ ನಮಗೆ ಅವರ ಸೇವೆ ಸಿಗಲಿಲ್ಲ. ಇಷ್ಟೆಲ್ಲಾ ಆಗಿದ್ದರೂ ಫೆಡರೇಷನ್ ಒಮ್ಮೆಯೂ ಅವರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಲಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಇದು ಫಿಫಾಕ್ಕೆ ಸಂಬಂಧಿಸಿದ ಟೂರ್ನಿಯಲ್ಲ. ಹೀಗಾಗಿ ಆಟಗಾರರನ್ನು ಬಿಟ್ಟುಕೊಡುವುದು ಕ್ಲಬ್‌ಗಳಿಗೆ ಕಡ್ಡಾಯವೇನಲ್ಲ. ಗಾಯಾಳಾದರೆ ಪರಿಹಾರವೂ ಸಿಗುವುದಿಲ್ಲ. ಹೀಗಾಗಿ ನಾವು ಆಟಗಾರರನ್ನು ಬಿಡುಗಡೆ ಮಾಡುತ್ತಿಲ್ಲ’ ಎಂದು ಅವರು ಕಟುವಾಗಿ ಹೇಳಿದರು.
ಶಿಬಿರಕ್ಕೆ ಸೇರ್ಪಡೆಗೊಳ್ಳದ ‘ಮರೈನರ್’ ತಂಡದ ಆಟಗಾರರೆಂದರೆ– ಅನಿರುದ್ಧ ಥಾಪಾ, ದೀಪಕ್ ತಂಗ್ರಿ, ಲಾಲೆಂಗ್‌ಮವಿಯಾ, ಲಿಸ್ಟನ್ ಕೊಲಾಕೊ, ಮನ್ವೀರ್ ಸಿಂಗ್, ಸಹಾಲ್ ಅಬ್ದುಲ್ ಸಮದ್ ಮತ್ತು ವಿಶಾಲ್ ಖೈತ್. ಇವರಲ್ಲಿ ಮನ್ವೀರ್ ಅವರು ಗಾಯಾಳಾಗಿದ್ದಾರೆ.
ಮುಂದಿನ ತಿಂಗಳು ಕತಾರ್‌ನಲ್ಲಿ ನಡೆಯಲಿರುವ ಎಎಫ್‌ಸಿ 23 ವರ್ಷದೊಳಗಿನವರ ಏಷ್ಯನ್ ಕಪ್ ಕ್ವಾಲಿಫೈರ್‌ಗೆ ಆಯ್ಕೆಯಾಗಿ ಸಿದ್ಧತೆಯಲ್ಲಿ ಭಾಗಿಯಾಗಿರುವ ಭಾರತ ತಂಡಕ್ಕೆ ತನ್ನ ಆಟಗಾರರಾದ ದೀಪೇಂದು ಬಿಸ್ವಾಸ್, ಸುಹೇಲ್ ಭಟ್, ಪ್ರಿಯಾಂಶ್ ದುಬೆ ಮತ್ತು ಟಿ.ಅಭಿಷೇಕ್ ಸಿಂಗ್ ಅವರನ್ನು ಬಿಟ್ಟುಕೊಡಲೂ ಮೋಹನ್ ಬಾಗನ್ ನಿರಾಕರಿಸಿದೆ.
‘ರಾಷ್ಟ್ರೀಯ ಹಿತಾಸಕ್ತಿ’ ಗಮನದಲ್ಲಿಟ್ಟುಕೊಂಡು, ಖಾಲಿದ್ ಜಮೀಲ್ ಅವರನ್ನು ಕರ್ತವ್ಯದಿಂದ ಮುಕ್ತಿಗೊಳಿಸಿದ್ದಕ್ಕೆ ಜಮ್‌ಶೆಡ್‌ಪುರ ಎಫ್‌ಸಿಗೆ ಧನ್ಯವಾದ ಸಲ್ಲಿಸಿರುವ ಎಐಎಫ್‌ಎಫ್, ‘ಸಹಕಾರ’ ನೀಡುವಂತೆ ಎಲ್ಲ ಕ್ಲಬ್‌ಗಳಿಗೆ ಮನವಿ ಮಾಡಿದೆ. ಇದರ ಮಧ್ಯೆಯೇ ಬಾಗನ್ ತಂಡ ಸಿಟ್ಟು ಹೊರಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.