ADVERTISEMENT

ಅರಬ್‌ ನಾಡಿನ ತಂಡಕ್ಕೆ ಐತಿಹಾಸಿಕ ಸಾಧನೆಯ ಕನಸು: ರಾಮೋಸ್‌ ಮೇಲೆ ಚಿತ್ತ

ಪೋರ್ಚುಗಲ್‌ಗೆ ಮೊರೊಕ್ಕೊ ಸವಾಲು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 13:48 IST
Last Updated 9 ಡಿಸೆಂಬರ್ 2022, 13:48 IST
ಪೋರ್ಚುಗಲ್‌ ತಂಡದ ಗೊನ್ಸಾಲೊ ರಾಮೋಸ್ –ಎಎಫ್‌ಪಿ ಚಿತ್ರ
ಪೋರ್ಚುಗಲ್‌ ತಂಡದ ಗೊನ್ಸಾಲೊ ರಾಮೋಸ್ –ಎಎಫ್‌ಪಿ ಚಿತ್ರ   

ದೋಹಾ: ಐತಿಹಾಸಿಕ ಸಾಧನೆಯ ಹಂಬಲದಲ್ಲಿರುವ ಮೊರೊಕ್ಕೊ ತಂಡ, ಫಿಫಾ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಶನಿವಾರ ಪೋರ್ಚುಗಲ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಟೂರ್ನಿಯಲ್ಲಿ ಈಗಾಗಲೇ ಅಚ್ಚರಿಯ ಫಲಿತಾಂಶದಿಂದ ಸದ್ದು ಮಾಡಿರುವ ಮೊರೊಕ್ಕೊ, ಅಲ್‌ ತುಮಾಮಾ ಕ್ರೀಡಾಂಗಣದಲ್ಲಿ ಗೆಲುವಿನ ಓಟ ಮುಂದುವರಿಸುವ ಕನಸಿನಲ್ಲಿದೆ. ಆದರೆ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್‌ ತಂಡವನ್ನು 6–1 ರಿಂದ ಬಗ್ಗುಬಡಿದಿದ್ದ ಪೋರ್ಚುಗಲ್‌ ತಂಡ ಮೊರೊಕ್ಕೊಗೆ ತಡೆಯೊಡ್ಡಲು ಸಜ್ಜಾಗಿದೆ.

36 ವರ್ಷಗಳ ಹಿಂದೆ ಮೆಕ್ಸಿಕೊದಲ್ಲಿ ನಡೆದಿದ್ದ ಟೂರ್ನಿಯಲ್ಲಿ 16ರ ಘಟ್ಟ ಪ್ರವೇಶಿಸಿದ್ದ ಮೊರೊಕ್ಕೊ ಈ ಸಾಧನೆ ಮಾಡಿದ ಆಫ್ರಿಕಾದ ಮೊದಲ ದೇಶ ಎಂಬ ಗೌರವ ಪಡೆದುಕೊಂಡಿತ್ತು. ಇದೀಗ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಆಫ್ರಿಕಾ ಮತ್ತು ಅರಬ್‌ ನಾಡಿನ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದೆ.

ADVERTISEMENT

ಮೊರೊಕ್ಕೊ ತಂಡ 16ರ ಘಟ್ಟದಲ್ಲಿ ಯೂರೋಪಿನ ಪ್ರಬಲ ತಂಡಗಳಲ್ಲಿ ಒಂದಾಗಿರುವ ಸ್ಪೇನ್‌ಗೆ ಸೋಲುಣಿಸಿತ್ತು. ಎರಡು ಗಂಟೆಗಳ ಆಟದಲ್ಲಿ ಸ್ಪೇನ್‌ಗೆ ಗೋಲು ನಿರಾಕರಿಸಿ, 0–0 ರಲ್ಲಿ ಡ್ರಾ ಸಾಧಿಸಿತ್ತು. ಬಳಿಕ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು.

ರಾಮೋಸ್ ಮೇಲೆ ಚಿತ್ತ: ಸ್ವಿಟ್ಜರ್‌ಲೆಂಡ್‌ ವಿರುದ್ಧ ಮೂರು ಗೋಲುಗಳನ್ನು ಗಳಿಸಿದ್ದ ಪೋರ್ಚುಗಲ್‌ನ ಗೊನ್ಸಾಲೊ ರಾಮೋಸ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 21 ವರ್ಷದ ಅವರು ಕ್ರಿಸ್ಟಿಯಾನೊ ರೊನಾಲ್ಡೊ ಬದಲು ಆಡಲಿಳಿದಿದ್ದರು. ಕೋರ್ಚ್‌ ಫೆರ್ನಾಂಡೊ ಸಾಂಟೋಸ್‌ ಈ ಪಂದ್ಯದಲ್ಲೂ ರೊನಾಲ್ಡೊ ಜಾಗದಲ್ಲಿ ರಾಮೋಸ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೇ ಅಧಿಕ.

‘ನನ್ನ ತಂತ್ರಗಾರಿಕೆಗೆ ಸೂಕ್ತ ಎನಿಸಬಲ್ಲ ಆಟಗಾರರನ್ನು ಕಣಕ್ಕಿಳಿಸುತ್ತೇನೆ. ವೃತ್ತಿಜೀವನದ ಉದ್ದಕ್ಕೂ ಅದನ್ನೇ ಮಾಡುತ್ತಾ ಬಂದಿದ್ದೇನೆ’ ಎಂದು ಸಾಂಟೋಸ್‌ ಹೇಳಿದ್ದಾರೆ.

ಜಾವೊ ಫೆಲಿಕ್ಸ್‌ ಮತ್ತು ಬ್ರೂನೊ ಫೆರ್ನಾಂಡಿಸ್‌ ಅವರೂ ಉತ್ತಮ ಲಯದಲ್ಲಿ ಆಡುತ್ತಿದ್ದಾರೆ. ರೊನಾಲ್ಡೊ ಇಲ್ಲದೆಯೂ ಶ್ರೇಷ್ಠ ಪ್ರದರ್ಶನ ನೀಡುವ ತಾಕತ್ತು ಹೊಂದಿದ್ದೇವೆ ಎಂಬುದನ್ನು ಪೋರ್ಚುಗಲ್‌ ಆಟಗಾರರು ಕಳೆದ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದರು.

ಉಭಯ ತಂಡಗಳು ಈ ಹಿಂದೆ ವಿಶ್ವಕಪ್‌ ಟೂರ್ನಿಯಲ್ಲಿ ಮಾತ್ರ ಪೈಪೋಟಿ ನಡೆಸಿವೆ. 1986ರ ಟೂರ್ನಿಯ ಗುಂಪು ಹಂತದ ಪಂದ್ಯವನ್ನು ಮೊರೊಕ್ಕೊ 3–1 ಗೋಲುಗಳಿಂದ ಗೆದ್ದಿದ್ದರೆ, ನಾಲ್ಕು ವರ್ಷಗಳ ಹಿಂದೆ ರಷ್ಯಾದಲ್ಲಿ ನಡೆದಿದ್ದ ಟೂರ್ನಿಯ ಪಂದ್ಯವನ್ನು ಪೋರ್ಚುಗಲ್‌ 1–0ರಲ್ಲಿ ಜಯಿಸಿತ್ತು. ರೊನಾಲ್ಡೊ ಅವರು ಗೆಲುವಿನ ಗೋಲು ಹೊಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.