ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಮುಂಬೈ ಸಿಟಿ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ಮಂಗಳವಾರ ಬೆಂಗಳೂರು ಎಫ್‌ಸಿ ತಂಡವನ್ನು 2–0 ಗೋಲುಗಳಿಂದ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಿತು.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಮುಂಬೈ ತಂಡಕ್ಕೆ ಮಹತ್ವದ್ದಾಗಿತ್ತು. ನಾಕೌಟ್ ಪ್ರವೇಶಕ್ಕೆ ಒಂದು ಅಂಕದ ಕೊರತೆ ಎದುರಿಸುತ್ತಿದ್ದ ತಂಡವು ಈ ಗೆಲುವಿನೊಂದಿಗೆ ಪೂರ್ಣ ಮೂರು ಅಂಕ ಪಡೆಯಿತು. ಈ ಮೂಲಕ ಒಡಿಶಾ ತಂಡವನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡವು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಲೀಗ್‌ನ ತಮ್ಮ ಕೊನೆಯ ಪಂದ್ಯವನ್ನು ಜಯಿಸಿ ಅಥವಾ ಡ್ರಾ ಸಾಧಿಸಿ ಮೂರನೇ ಸ್ಥಾನಕ್ಕೇರುವ ಅವಕಾಶವನ್ನು ಕೈಚೆಲ್ಲಿತು. ತವರಿನ ಪ್ರೇಕ್ಷಕರ ಎದುರು ಆತಿಥೇಯ ತಂಡದ ಆಟಗಾರರು ನಿರಾಸೆ ಮೂಡಿಸಿದರು.
ಪಂದ್ಯದ ಎಂಟನೇ ನಿಮಿಷದಲ್ಲೇ ನಾಯಕ ಲಾಲಿಯನ್ಜುವಾಲಾ ಚಾಂಗ್ಟೆ ಅವರು ಮುಂಬೈ ತಂಡಕ್ಕೆ ಮಹತ್ವದ ಮುನ್ನಡೆ ಒದಗಿಸಿದರು. 37ನೇ ನಿಮಿಷದಲ್ಲಿ ಗ್ರೀಸ್‌ನ ನಿಕೋಸ್ ಕರೇಲಿಸ್ ಅವರು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ವಿರಾಮದ ವೇಳೆಗೆ 2–0 ಮುನ್ನಡೆ ಪಡೆದ ಪ್ರವಾಸಿ ತಂಡವು ಅದೇ ಅಂತರವನ್ನು ಕೊನೆಯವರೆಗೆ ಕಾಯ್ದುಕೊಳ್ಳವಲ್ಲಿ ಯಶಸ್ವಿಯಾಯಿತು.
ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿರುವ ಹಾಲಿ ಚಾಂಪಿಯನ್ ಮೋಹನ್ ಬಾಗನ್ ಸೂಪರ್ ಜೈಂಟ್ಸ್ (56) ಮತ್ತು ಗೋವಾ ಎಫ್‌ಸಿ (48) ತಂಡಗಳು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದವು.
ಉಳಿದ ಎರಡು ಸ್ಥಾನಕ್ಕಾಗಿ ಕ್ರಮವಾಗಿ ಮೂರರಿಂದ ಆರನೇ ಸ್ಥಾನ ಪಡೆದಿರುವ ನಾರ್ತ್‌ಈಸ್ಟ್ ಯುನೈಟೆಡ್ (38), ಬೆಂಗಳೂರು ಎಫ್‌ಸಿ (38), ಜೆಮ್‌ಶೆಡ್‌ಪುರ (38) ಮತ್ತು ಮುಂಬೈ ಸಿಟಿ ಎಫ್‌ಸಿ (36) ತಂಡಗಳು ಪ್ಲೇ ಆಫ್ ಸುತ್ತಿನಲ್ಲಿ ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.