ಬೆಂಗಳೂರು: ಪ್ಲೇ ಆಫ್ ಸ್ಥಾನವನ್ನು ಈಗಾಗಲೇ ಖಚಿತಪಡಿಸಿಕೊಂಡಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಮಂಗಳವಾರ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಎದುರಿಸಲಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸುನಿಲ್ ಚೆಟ್ರಿ ಬಳಗವು ತವರಿನಲ್ಲಿ ಪಾರಮ್ಯ ಮುಂದುವರಿಸಿ, ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯವತ್ತ ಚಿತ್ತ ಹರಿಸಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಅಜೇಯವಾಗಿರುವ (ಮೂರು ಗೆಲುವು, ಒಂದು ಡ್ರಾ) ಬಿಎಫ್‌ಸಿ ತಂಡವು ಗುಂಪು ಹಂತದ ಅಭಿಯಾನವನ್ನು ಗೆಲುವಿನೊಂದಿಗೆ ಮುಗಿಸುವ ಛಲದಲ್ಲಿದೆ.
ಏಳನೇ ಸ್ಥಾನದಲ್ಲಿರುವ ಮುಂಬೈ ತಂಡಕ್ಕೆ ಇದು ನಿರ್ಣಾಯಕ ಪಂದ್ಯವಾಗಿದೆ. ಪ್ಲೇ ಆಫ್‌ಗೆ ಅರ್ಹತೆ ಪಡೆಯಲು ಒಂದು ಅಂಕದ ಕೊರತೆಯಿದೆ. ಹೀಗಾಗಿ, ಲೀಗ್‌ನ ಕೊನೆಯ ಪಂದ್ಯದಲ್ಲಿ ಗೆಲುವು ಇಲ್ಲವೇ ಡ್ರಾ ಸಾಧಿಸುವ ಒತ್ತಡದಲ್ಲಿದೆ. ಇದು ಸಾಧ್ಯವಾದರೆ ಆರನೇ ಸ್ಥಾನದಲ್ಲಿರುವ ಒಡಿಶಾ ತಂಡವನ್ನು ಹಿಂದಿಕ್ಕಿ ಮುಂಬೈ ತಂಡವು ನಾಕೌಟ್‌ಗೆ ಮುನ್ನಡೆಯಲಿದೆ.
ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಮೋಹನ್ ಬಾಗನ್ ಮತ್ತು ಗೋವಾ ಎಫ್‌ಸಿ ಈಗಾಗಲೇ ಸೆಮಿಫೈನಲ್‌ಗೆ ನೇರ ಅರ್ಹತೆ ಪಡೆದಿವೆ. ಉಳಿದ ಎರಡು ಸ್ಥಾನಕ್ಕಾಗಿ ಮೂರರಿಂದ ಆರನೇ ಸ್ಥಾನದಲ್ಲಿರುವ ತಂಡಗಳ ಮಧ್ಯೆ ಪೈಪೋಟಿ ಏರ್ಪಡಲಿದೆ.
ಐಎಸ್‌ಎಲ್‌ನಲ್ಲಿ ಈತನಕ ಬಿಎಫ್‌ಸಿ ಮತ್ತು ಮುಂಬೈ ತಂಡಗಳು ಒಟ್ಟು 17 ಬಾರಿ ಮುಖಾಮುಖಿಯಾಗಿದ್ದು, ಒಂಬತ್ತು ಬಾರಿ ಮುಂಬೈ ಜಯಗಳಿಸಿದೆ. ಬೆಂಗಳೂರು ತಂಡವು ಆರು ಬಾರಿ ಗೆಲುವು ಕಂಡಿದೆ. ಎರಡು ಪಂದ್ಯಗಳು ಡ್ರಾ ಆಗಿವೆ. ಕೊನೆಯ ನಾಲ್ಕು ಮುಖಾಮುಖಿಯಲ್ಲಿ ಬೆಂಗಳೂರು ಮೂರರಲ್ಲಿ ಸೋತಿದೆ.
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಘೋಷಿಸಿದ್ದ ನಿವೃತ್ತಿಯಿಂದ ಹೊರಬಂದಿರುವ 40 ವರ್ಷ ವಯಸ್ಸಿನ ಸುನಿಲ್ ಚೆಟ್ರಿ ಉತ್ತಮ ಲಯದಲ್ಲಿದ್ದು, ಈ ಆವೃತ್ತಿಯಲ್ಲಿ ಒಟ್ಟು 12 ಗೋಲು ಗಳಿಸಿದ್ದಾರೆ. ಗರಿಷ್ಠ ಗೋಲು ದಾಖಲಿಸಿದವರ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ವಿರುದ್ಧ ಇನ್ನು ಒಂದು ಗೋಲು ಹೊಡೆದರೆ, ಐಎಸ್‌ಎಲ್‌ನಲ್ಲಿ ಆ ತಂಡದ ಎದುರು 10 ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಅವರದಾಗಲಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಪೋರ್ಟ್ಸ್ 18
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.