ADVERTISEMENT

ಆರ್‌ಎಫ್‌ವೈಸಿ ಪ್ರತಿಭೆಗಳಿಗೆ ಐಎಸ್‌ಎಲ್ ಹೆಬ್ಬಾಗಿಲು

ಬೆಂಗಳೂರು ಎಫ್‌ಸಿ ಸೇರಿದ ಥೊಯ್ ಸಿಂಗ್; 7 ಮಂದಿ ಜೊತೆ 3 ವರ್ಷಗಳ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 13:56 IST
Last Updated 14 ಅಕ್ಟೋಬರ್ 2020, 13:56 IST
ದಿಗ್ಗಜ ಆಟಗಾರರು ಪಾಲ್ಗೊಳ್ಳುವ ಐಎಸ್‌ಎಲ್‌ನಲ್ಲಿ ಕಣಕ್ಕೆ ಇಳಿಯಲು ಆರ್‌ಎಫ್‌ವೈಸಿ ಅಕಾಡೆಮಿಯ ಯುವ ಪ್ರತಿಭೆಗಳು ಸಜ್ಜಾಗಿದ್ದಾರೆ –ಪ್ರಜಾವಾಣಿ ಸಾಂದರ್ಭಿಕ ಚಿತ್ರ
ದಿಗ್ಗಜ ಆಟಗಾರರು ಪಾಲ್ಗೊಳ್ಳುವ ಐಎಸ್‌ಎಲ್‌ನಲ್ಲಿ ಕಣಕ್ಕೆ ಇಳಿಯಲು ಆರ್‌ಎಫ್‌ವೈಸಿ ಅಕಾಡೆಮಿಯ ಯುವ ಪ್ರತಿಭೆಗಳು ಸಜ್ಜಾಗಿದ್ದಾರೆ –ಪ್ರಜಾವಾಣಿ ಸಾಂದರ್ಭಿಕ ಚಿತ್ರ   

ಬೆಂಗಳೂರು: ಫುಟ್‌ಬಾಲ್‌ನಲ್ಲಿ ಹೆಸರು ಮಾಡುವ ಕನಸು ಹೊತ್ತುನವಿ ಮುಂಬೈನ ಹಸಿರು ಅಂಗಣದಲ್ಲಿ ಸಾಧನೆ ಮಾಡಿದ ಯುವ ಆಟಗಾರರು ಈಗ ವೃತ್ತಿಪರ ಆಟದ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಅವರ ಬದುಕಿಗೆ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಹೊಸ ಹಾದಿ ತೆರೆದಿದೆ.

ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್‌ (ಆರ್‌ಎಫ್‌ವೈಸಿ) ಅಕಾಡೆಮಿಯಲ್ಲಿ ಫುಟ್‌ಬಾಲ್ ಕೋರ್ಸ್ ಪೂರ್ಣಗೊಳಿಸಿರುವವರ ಮೊದಲ ತಂಡದ ಒಂಬತ್ತು ಮಂದಿ ಐಎಸ್‌ಎಲ್‌ನಲ್ಲಿ ಆಡುವ ವಿವಿಧ ತಂಡಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಥೊಯ್ ಸಿಂಗ್, ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಸೇರಿದ್ದಾರೆ. ಕೇರಳ ಬ್ಲಾಸ್ಟರ್ಸ್‌ ತಂಡ ಅರಿತ್ರಾ ದಾಸ್, ಮುಹಮ್ಮದ್ ಬಸಿತ್ ಮತ್ತು ಬೀರೇಂದ್ರ ಸಿಂಗ್ ಅವರನ್ನು ತನ್ನತ್ತ ಸೆಳೆದುಕೊಂಡಿದೆ. ಜಿ.ಬಾಲಾಜಿ ಮತ್ತು ಆಕಿಬ್ ನವಾಬ್‌ಗೆ ಚೆನ್ನೈಯಿನ್ ಎಫ್‌ಸಿಯಲ್ಲಿ ಅವಕಾಶ ಸಿಕ್ಕಿದ್ದು ಮುಹಮ್ಮದ್ ನೆಮಿಲ್, ಎಫ್‌ಸಿ ಗೋವಾದಲ್ಲೂ ಆಯುಷ್ ಚಿಕಾರ, ಮುಂಬೈ ಎಫ್‌ಸಿಯಲ್ಲೂ ಕೌಸ್ತವ್ ದತ್ತ, ಹೈದರಾಬಾದ್ ಎಫ್‌ಸಿಯಲ್ಲೂ ನೆಲೆ ಕಂಡುಕೊಂಡಿದ್ದಾರೆ. ಈ ಪೈಕಿ ಬಾಲಾಜಿ ಮತ್ತು ನವಾಬ್‌ ಅವರ ಒಪ್ಪಂದ ಎರಡು ವರ್ಷದ್ದು. ಉಳಿದ ಏಳು ಮಂದಿ ಮೂರು ವರ್ಷಗಳ ಒಪ್ಪಂದದಲ್ಲಿ ಏರ್ಪಟ್ಟಿದ್ದಾರೆ.

ಭಾರತದಲ್ಲಿ ಫುಟ್‌ಬಾಲ್ ಸಂಸ್ಕೃತಿ ಬೆಳೆಸುವ ಉದ್ದೇಶದೊಂದಿಗೆ ಆರಂಭಿಸಿರುವ ಆರ್‌ಎಫ್‌ವೈಸಿ ದೇಶದ ವಿವಿಧ ಮೂಲೆಗಳ ಪ್ರತಿಭೆಗಳನ್ನು ವಿಶಿಷ್ಟ ರೀತಿಯಲ್ಲಿ ಆರಿಸಿಕೊಂಡು ತರಬೇತಿ ನೀಡುತ್ತಿದೆ. ಉಚಿತ ಶಿಕ್ಷಣ, ವಸತಿ ಸೌಲಭ್ಯ ಕಲ್ಪಿಸಿ ಕ್ರೀಡೆಗೂ ಶಿಕ್ಷಣಕ್ಕೂ ಸಮಾನ ಅವಕಾಶ ನೀಡಲಾಗುತ್ತಿದೆ. ಅಕಾಡೆಮಿ ಆರಂಭಗೊಂಡಾಗ ಸೇರಿದ ಆಟಗಾರರು ಈಗ ಐದು ವರ್ಷಗಳ ಕೋರ್ಸ್ ಮುಕ್ತಾಯಗೊಳಿಸಿದ್ದಾರೆ.

ADVERTISEMENT

ಅಕಾಡೆಮಿಗೆ ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಇತ್ತೀಚೆಗೆ 2–ಸ್ಟಾರ್ ಮನ್ನಣೆ ನೀಡಿದೆ. ಈ ’ಪದವಿ’ ಸಿಕ್ಕಿದ ಭಾರತದ ಮೊದಲ ವಸತಿಯುತ ಅಕಾಡೆಮಿಯಾಗಿದೆ ಇದು. 2019ರಲ್ಲಿ ಅಕಾಡೆಮಿಗೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ಪಂಚತಾರಾ ಪದವಿ ಲಭಿಸಿತ್ತು.ಕಳೆದ ವರ್ಷ 22 ಯುವ ಆಟಗಾರರು ಅಕಾಡೆಮಿಯನ್ನು ಸೇರಿದ್ದು ಈಗ ಅಲ್ಲಿರುವ ಒಟ್ಟು ಪ್ರತಿಭೆಗಳ ಸಂಖ್ಯೆ 65. ದೇಶ–ವಿದೇಶದ 22 ಪರಿಣಿತ ಕೋಚ್‌ಗಳು ಮತ್ತು ವಿವಿಧ ವಿಷಯತಜ್ಞರು ಯುವ ಫುಟ್‌ಬಾಲಿಗರ ಕಾಲ್ಚಳಕಕ್ಕೆ ಮೊನಚು ತುಂಬುತ್ತಿದ್ದಾರೆ.

ಇದು, ಸಂತೋಷ, ಸಂಭ್ರಮ ಮತ್ತು ಅಭಿಮಾನದ ಕ್ಷಣ. ನಮ್ಮಲ್ಲಿ ಬೆಳೆದ ‘ಯುವ ಚಾಂಪಿಯನ್ನರು’ ವೃತ್ತಿಪರವಾಗಿರುವುದು ಮತ್ತು ಪ್ರತಿಷ್ಠಿತ ಲೀಗ್‌ನಲ್ಲಿ ಆಡುವಷ್ಟು ಪಳಗಿರುವುದು ಸಣ್ಣ ವಿಷಯವೇನಲ್ಲ. 2015ರಲ್ಲಿ ಅಕಾಡೆಮಿಯನ್ನು ಆರಂಭಿಸುವಾಗ ಭಾರತದ ಯುವ ಆಟಗಾರರ ಪ್ರತಿಭೆಯನ್ನು ಗುರುತಿಸಿ, ಅವರನ್ನು ವೃತ್ತಿಪರರಾಗಿಸುವ ಗುರಿಯೊಂದೇ ನಮ್ಮ ಮುಂದೆ ಇತ್ತು. ಹದಿಹರಯದಲ್ಲಿ ಆರ್‌ಎಫ್‌ವೈಸಿ ಸೇರಿದ ಅವರು ಕೆಲವೇ ವರ್ಷಗಳಲ್ಲಿ ಪರಿಣಿತ ಆಟಗಾರರಾಗಿ ಹೊರಹೋಗುತ್ತಿರುವುದು ನನ್ನನ್ನು ಪುಳಕಗೊಳಿಸಿದೆ. ದೇಶದ ಅತ್ಯುತ್ತಮ ಫುಟ್‌ಬಾಲ್ ಕ್ಲಬ್‌ಗಳು ಅವರನ್ನು ತಮ್ಮಲ್ಲಿ ಸೇರಿಸಿಕೊಂಡಿರುವುದೇ ಈ ಆಟಗಾರರ ಸಾಮರ್ಥ್ಯಕ್ಕೆ ಸಾಕ್ಷಿ. ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಯನ್ನು ಎತ್ತರಕ್ಕೆ ಬೆಳೆಸುವುದಕ್ಕಾಗಿ ಅತ್ಯುನ್ನತ ಮಟ್ಟದ ಮೂಲಸೌಲಭ್ಯಗಳ ಅಗತ್ಯವಿದೆ. ಅದನ್ನು ಅಕಾಡೆಮಿಯಲ್ಲಿ ಕಲ್ಪಿಸಲಾಗುತ್ತಿದೆ. ಇದು, ಆರಂಭಿಕ ಘಟ್ಟವಾಗಿದ್ದು ಇನ್ನಷ್ಟು ಬೆಳವಣಿಗೆ ಸಾಧಿಸುವ ಗುರಿ ನಮ್ಮದು.

ನೀತಾ ಅಂಬಾನಿ,

-ರಿಲಯನ್ಸ್ ಫೌಂಡೇಷನ್‌ನ ಸ್ಥಾಪಕಿ–ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.