ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಮುಖ್ಯ ಕೋಚ್ ಜುವಾನ್ ಪೆಡ್ರೊ ಬೆನಾಲಿ ಮತ್ತು ನಾಯಕ ಮಿಗುಯೆಲ್ ಜಬಾಕೊ
ಕೋಲ್ಕತ್ತ: ಪೂರ್ಣ ಪ್ರಾಬಲ್ಯ ಸಾಧಿಸಿದ ನಾರ್ತ್ ಈಸ್ಟ್ ಯುನೈಟೆಡ್ ತಂಡ, 134ನೇ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಡೈಮಂಡ್ ಹಾರ್ಬರ್ ತಂಡವನ್ನು 6–1 ಗೋಲುಗಳಿಂದ ಸೋಲಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿ ಮೆರೆದಾಡಿತು.
ವಿವೇಕಾನಂದ ಯುವಭಾರತಿ ಕ್ರೀಡಾಂಗಣದಲ್ಲಿ ಶನಿವಾರ ಹೊನಲು ಬೆಳಕಿನಡಿ ನಾರ್ತ್‌ಈಸ್ಟ್ ತಂಡ ಆಕ್ರಮಣಕಾರಿ ಆಟವಾಡಿತು. ಪದಾರ್ಪಣೆಯಲ್ಲೇ ಪ್ರಬಲ ತಂಡಗಳನ್ನು ಸೋಲಿಸುತ್ತ ಬಂದ ಡೈಮಂಡ್ ಹಾರ್ಬರ್ ತಂಡ ಅಂತಿಮ ಪಂದ್ಯದಲ್ಲಿ ನಿರೀಕ್ಷಿತ ಹೋರಾಟ ತೋರಲಿಲ್ಲ. ವಿರಾಮದ ವೇಳೆಗೆ ‘ಹೈಲ್ಯಾಂಡರ್ಸ್’ (ನಾರ್ತ್‌ಈಸ್ಟ್) 2–0 ಗೋಲುಗಳಿಂದ ಮುಂದಿತ್ತು.
ಸೆಂಟರ್ ಬ್ಯಾಕ್ ಆಟಗಾರ ಅಶೀರ್ ಅಖ್ತರ್ (30ನೇ ನಿಮಿಷ), ಪಾರ್ಥಿಬ್ ಗೊಗೊಯಿ (45+1), ಹುಯಿದೊಮ್ ಥೋಯಿ ಸಿಂಗ್ (50ನೇ ನಿಮಿಷ), ಜೈರೊ (81ನೇ ನಿಮಿಷ), ಆ್ಯಂಡಿ ಗೈತಾನ್ (85ನೇ ನಿಮಿಷ) ಮತ್ತು ಅಜರಾಯೆ (90+3) ಅವರು ‘ನಾರ್ತ್‌ಈಸ್ಟ್’ ತಂಡದ ಗೋಲುಗಳನ್ನು ಗಳಿಸಿದರು. ಹಾರ್ಬರ್ ತಂಡದ ಏಕೈಕ ಗೋಲನ್ನು 68ನೇ ನಿಮಿಷ ಸ್ಲೊವೇನಿಯಾದ ಲುಕಾ ಮೇಯ್ಸನ್ ಗಳಿಸಿದರು.
ಕಳೆದ 25 ವರ್ಷಗಳ ಅವಧಿಯಲ್ಲಿ ಸತತವಾಗಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡವೆಂಬ ಹಿರಿಮೆಯೂ ನಾರ್ತ್‌ಈಸ್ಟ್ ತಂಡದ್ದಾಯಿತು. 1896ರ ನಂತರ ಫೈನಲ್‌ನಲ್ಲಿ ಅತಿ ಹೆಚ್ಚು ಅಂತರದ ಗೆಲುವು ಸರಿಗಟ್ಟಿದ ಸಾಧನೆಯೂ ಸಹ ಈ ತಂಡದ ಪಾಲಾಯಿತು. ಆ ವರ್ಷ ಸಾಮರ್ಸೆಟ್ ತಂಡ ಫೈನಲ್‌ನಲ್ಲಿ ಇಷ್ಟೇ ಅಂತರದಿಂದ ಬ್ಲ್ಯಾಕ್ ವೈಟ್ ತಂಡವನ್ನು ಮಣಿಸಿತ್ತು.
ವೈಯಕ್ತಿಕ ಪ್ರಶಸ್ತಿ: ನಾರ್ತ್ ಈಸ್ಟ್ ತಂಡದಲ್ಲಿರುವ ಮೊರಾಕೊದ ಫಾರ್ವರ್ಡ್ ಅಲಾದ್ದೀನ್ ಅಜರಾಯೆ ಅವರು ಟೂರ್ನಿಯ ಆಟಗಾರನಾಗಿ ಗಮನ ಸೆಳೆದರಲ್ಲದೇ, ಅತಿ ಹೆಚ್ಚು (ಎಂಟು) ಗೋಲು ಗಳಿಸಿದ್ದಕ್ಕೆ ಗೋಲ್ಡನ್ ಬೂಟ್ ಮತ್ತು ಅತ್ಯುತ್ತಮ ಆಟಕ್ಕಾಗಿ ಗೋಲ್ಡನ್ ಬಾಲ್ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಗೋಲ್ಡನ್ ಗ್ಲೋವ್ ಪ್ರಶಸ್ತಿ ಗೌರವ ಇದೇ ತಂಡದ ಗೋಲ್ ಕೀಪರ್ ಗುರ್ಮೀತ್ ಅವರ ಪಾಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.