ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡದ ಜಾರ್ಜ್ ರೋಲ್ಯಾಂಡ್ ಪೆರೆರಾ ಡಿಯಾಜ್ ಅವರು ಚೆಂಡನ್ನುಗೋಲ್‌ಪೋಸ್ಟ್‌ನತ್ತ ಕಿಕ್ ಮಾಡಿದರು. ಪ್ರಜಾವಾಣಿ ಚಿತ್ರ ಎಸ್.ಕೆ. ದಿನೇಶ್
ಬೆಂಗಳೂರು: ಎರಡು ಗೋಲುಗಳ ಹಿನ್ನಡೆಯಿಂದ ಚೇತರಿಸಿಕೊಂಡ ಆತಿಥೇಯ ಬೆಂಗಳೂರು ಎಫ್‌ಸಿ, ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯದಲ್ಲಿ ಶನಿವಾರ ಎಫ್‌ಸಿ ಗೋವಾ ಜೊತೆ 2–2 ಗೋಲುಗಳ ಡ್ರಾ ಮಾಡಿಕೊಂಡಿತು. ತನ್ಮೂಲಕ ‘ಬ್ಲೂಸ್’ ತಂಡ ತವರಿನಲ್ಲಿ ಅಜೇಯ ದಾಖಲೆ ಮುಂದುವರಿಸಿದೆ.
ಚೆಟ್ರಿ ಬಳಗ ತವರಿನಲ್ಲಿ ಈ ಋತುವಿನಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಐದು ಗೆದ್ದು, ಎರಡನ್ನು ಡ್ರಾ ಮಾಡಿಕೊಂಡಿದೆ. ಬಿಎಫ್‌ಸಿ 12 ಪಂದ್ಯಗಳಿಂದ 24 ಪಾಯಿಂಟ್ಸ್ ಕಲೆಹಾಕಿದೆ. ತನ್ನ ಮುಂದಿನ ಪಂದ್ಯವನ್ನು ಚೆನ್ನೈನಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಡಿಸೆಂಬರ್ 28ರಂದು ಆಡಲಿದೆ.
ಮೊದಲ 10 ನಿಮಿಷ ಗೋವಾ ತಂಡ ಮೇಲುಗೈ ಸಾಧಿಸಿತು. ಚೆಂಡು ಬಹುತೇಕ ಆ ತಂಡದ ಆಟಗಾರರ ಹಿಡಿತದಲ್ಲೇ ಇತ್ತು. ಕಾರ್ನರ್, ಫ್ರೀಕಿಕ್ ಅವಕಾಶಗಳು ಆ ತಂಡಕ್ಕೆ ಹೆಚ್ಚು ದೊರೆತವು. ಏಳನೇ ನಿಮಿಷ ದೊರೆತ ಇಂಥ ಒಂದು ಫ್ರೀಕಿಕ್‌ನಲ್ಲಿ ದೇಜಾನ್ ಡ್ರಾಝಿಕ್ ಅವರು ಅಂಗಣದ ಬಲಮೂಲೆಯಿಂದ ಒದ್ದ ಚೆಂಡು ಗೋಲಿನ ಎದುರು ತೇಲಿಬಂದಿತು. ಬಾಕ್ಸ್‌ನ ಮಧ್ಯೆ ಬೆಂಗಳೂರು ಎಫ್‌ಸಿ ರಕ್ಷಣೆ ಆಟಗಾರರ ಸರ್ಪಗಾವಲಿನಲ್ಲಿದ್ದರೂ ಅನುಭವಿ ಸಂದೇಶ್ ಜಿಂಗಾನ್ ಅಮೋಘ ರೀತಿಯಲ್ಲಿ ಜಿಗಿದು ಚೆಂಡನ್ನು ಗೋಲಿನೊಳಗೆ ಹೆಡ್ ಮಾಡಿದರು.
ಬೆಂಗಳೂರು ಎಫ್‌ಸಿ ಸಾವರಿಸಿಕೊಂಡು ಪ್ರತಿದಾಳಿಗಳನ್ನು ನಡೆಸಿತು. 150ನೇ ಐಎಸ್‌ಎಲ್ ಪಂದ್ಯ ಆಡುತ್ತಿರುವ ನಾಯಕ ಸುನೀಲ್ ಚೆಟ್ರಿ ಮುಂಚೂಣಿಯಲ್ಲಿದ್ದರು. 14ನೇ ನಿಮಿಷ ಅವರ ಅತ್ಯುತ್ತಮ ಯತ್ನವೊಂದನ್ನು ಎಫ್‌ಸಿ ಗೋವಾದ ಗೋಲಿ ಹೃತಿಕ್ ತಿವಾರಿ ಕೊನೆಗಳಿಗೆಯಲ್ಲಿ ತಡೆದರು. ಆತಿಥೇಯ ತಂಡದ ಈ ನಿರಂತರ ದಾಳಿಗಳ ಹೊರತಾಗಿಯೂ ಮತ್ತೆ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದ್ದು ಗೋವಾ ತಂಡವೇ. 66ನೇ ನಿಮಿಷ ಸಾಹಿಲ್ ತವೋರಾ ಅವರು ಗೋಲು ಗಳಿಸಿದರು.
ಆದರೆ ಬ್ಲೂಸ್ ಐದೇ ನಿಮಿಷಗಳ ನಂತರ ರಯಾನ್ ವಿಲಿಯಮ್ಸ್ ಗೋಲು ಗಳಿಸಿ ಹಿನ್ನಡೆ ತಗ್ಗಿಸಿದರು. ಹರ್ಷ್ ಪತ್ರೆ ಬದಲು ಸಬ್‌ಸ್ಟಿಟ್ಯೂಟ್ ಆಗಿ ಆಡಲಿಳಿದಿದ್ದ ವಿನೀತ್ ವೆಂಕಟೇಶ್ ಅವರು ಗೋವಾ ರಕ್ಷಣೆ ಆಟಗಾರರನ್ನು ದಾಟಿ ಗೋಲಿನ ಎದುರು ಆಯಕಟ್ಟಿನ ಸ್ಥಳದಲ್ಲಿದ್ದ ವಿಲಿಯಮ್ಸ್‌ಗೆ ಚೆಂಡನ್ನು ದಾಟಿಸಿದರು. ಅವರು ತಪ್ಪು ಮಾಡಲಿಲ್ಲ. ಮೆಂಡೆಝ್ ಬದಲು ಸಬ್‌ಸ್ಟಿಟ್ಯೂಟ್ ಆಗಿ ಆಡಲಿಳಿದಿದ್ದ ಜಾರ್ಜ್ ಪರೀರಾ ಡಯಾಝ್ ಅವರು ಬಿಎಫ್‌ಸಿ ದಾಳಿಗೆ ಬಲ ನೀಡಿದರು. 83ನೇ ನಿಮಿಷ ರೋಷನ್ ಸಿಂಗ್ ಅವರ ಪಾಸ್‌ನಲ್ಲಿ ಡಯಾಝ್ ಸ್ಕೋರ್ ಸಮ ಮಾಡಿಕೊಂಡಾಗ ಪ್ರೇಕ್ಷಕರ ಸಂಭ್ರಮ ಮುಗಿಲುಮುಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.