ADVERTISEMENT

ಆಫ್ರಿಕಾ ಕಪ್‌ ಫೈನಲ್: ಮೊರಾಕೊ ವಿರುದ್ಧ ಪ್ರಶಸ್ತಿ ಗೆದ್ದ ಸೆನೆಗಲ್‌ ತಂಡ

ಏಜೆನ್ಸೀಸ್
Published 19 ಜನವರಿ 2026, 14:01 IST
Last Updated 19 ಜನವರಿ 2026, 14:01 IST
ಸೆನೆಗಲ್‌ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಲು ಯತ್ನಿಸಿದರು –ಎಎಫ್‌ಪಿ ಚಿತ್ರ
ಸೆನೆಗಲ್‌ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಲು ಯತ್ನಿಸಿದರು –ಎಎಫ್‌ಪಿ ಚಿತ್ರ   

ರಬಾತ್, ಮೊರೊಕ್ಕೊ: ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ‘ಆಫ್ರಿಕಾ ಕಪ್‌ ಆಫ್ ನೇಷನ್ಸ್‌’ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಸೆನೆಗಲ್‌ ತಂಡವು 1–0 ಗೋಲಿನಿಂದ ಆತಿಥೇಯ ಮೊರೊಕ್ಕೊ ತಂಡವನ್ನು ಭಾನುವಾರ ಮಣಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಹೆಚ್ಚುವರಿ ಅವಧಿಯಲ್ಲಿ ಪೆಪ್‌ ಗುಯೆ (90+4ನೇ ನಿಮಿಷ) ಅವರು ಸೆನೆಗಲ್‌ ಪರ ಗೆಲುವಿನ ಗೋಲು ಬಾರಿಸಿದರು. 

ರಬಾತ್‌ನ ಪ್ರಿನ್ಸ್ ಮೌಲಾಯ್ ಅಬ್ದುಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಿಗದಿತ ಅವಧಿ ಗೋಲುರಹಿತವಾಗಿತ್ತು. ಹೆಚ್ಚುವರಿ ಅವಧಿಯ ಆರಂಭದಲ್ಲಿ ಮೊರೊಕ್ಕೊ ತಂಡಕ್ಕೆ ನೀಡಿದ ಪೆನಾಲ್ಟಿ ವಿವಾದಕ್ಕೆ ಕಾರಣವಾಯಿತು. ವಿಎಆರ್ ಪರಿಶೀಲನೆಯ ನಂತರ ಮೊರಾಕೊಗೆ ಪೆನಾಲ್ಟಿ ನೀಡಲಾಯಿತು. ರೆಫ್ರಿ ನಿರ್ಧಾರ ಪ್ರತಿಭಟಿಸಿ ಸೆನೆಗಲ್‌ ಆಟಗಾರರು ಮೈದಾನದಿಂದ ಹೊರನಡೆದರು. ಈ ವೇಳೆ ಸ್ಟ್ಯಾಂಡ್‌ಗಳಲ್ಲಿಯೂ ಪರಿಸ್ಥಿತಿ ಬಿಗಡಾಯಿಸಿ, ಸೆನೆಗಲ್ ಅಭಿಮಾನಿಗಳು ಮೈದಾನಕ್ಕೆ ನುಗ್ಗಲು ಪ್ರಯತ್ನಿಸಿದರು. ಭದ್ರತಾ ಪಡೆ ಸಿಬ್ಬಂದಿಯೊಂದಿಗೆ ಜಟಾಪಟಿ ನಡೆಸಿದರು. 

ಪಂದ್ಯವು ಸುಮಾರು 20 ನಿಮಿಷ ಸ್ಥಗಿತಗೊಂಡಿತು. ಮಾತುಕತೆಯ ಬಳಿಕ ಪಂದ್ಯ ಆರಂಭಗೊಂಡಾಗ ಸೆನೆಗಲ್ ಗೋಲ್‌ಕೀಪರ್ ಎಡ್ವರ್ಡ್ ಮೆಂಡಿ ಅವರು ಎದುರಾಳಿ ತಂಡದ ಪೆನಾಲ್ಟಿ ಅವಕಾಶವನ್ನು ಯಶಸ್ವಿಯಾಗಿ ತಡೆದರು. ಅದರ ಬೆನ್ನಲ್ಲೇ ಗುಯೆ ಫೀಲ್ಡ್‌ ಗೋಲು ಮೂಲಕ ಸೆನೆಗಲ್‌ ತಂಡಕ್ಕೆ ಗೆಲುವನ್ನು ತಂದಿತ್ತರು.  66,500ಕ್ಕೂ ಹೆಚ್ಚು ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು.

ADVERTISEMENT

ಇದು ಸೆನೆಗಲ್‌ ತಂಡಕ್ಕೆ ಎರಡನೇ ಆಫ್ರಿಕಾ ಕಪ್ ಗೆಲುವು. 2021ರಲ್ಲಿ ಈಜಿಪ್ಟ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದು ಮೊದಲ ಬಾರಿ ಚಾಂಪಿಯನ್‌ ಆಗಿತ್ತು.

‘ಎದುರಾಳಿ ತಂಡಕ್ಕೆ ನೀಡಿದ ಪೆನಾಲ್ಟಿಯಿಂದ ನಮಗೆ ಅನ್ಯಾಯವಾಗಿದೆ ಎಂಬ ಭಾವನೆ ಇತ್ತು. ಆ ಪೆನಾಲ್ಟಿಗೆ ಸ್ವಲ್ಪ ಮೊದಲು ನಮಗೆ ಗೋಲು ಗಳಿಸುವ ಅವಕಾಶವಿತ್ತು. ರೆಫರಿ ಅವರು ವಿಎಆರ್ ಪರಿಶೀಲನೆ ಮೊರೆ ಹೋಗಲಿಲ್ಲ’ ಎಂದು ಗೆಲುವಿನ ರೂವಾರಿ ಗುಯೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಫಿಫಾ ಅಧ್ಯಕ್ಷ ಖಂಡನೆ: ಫೈನಲ್‌ ಪಂದ್ಯದಲ್ಲಿ ಮೊರಾಕ್ಕೊಗೆ ನೀಡಲಾದ ಪೆನಾಲ್ಟಿಯನ್ನು ಪ್ರತಿಭಟಿಸಿ ಮೈದಾನದಿಂದ ಹೊರನಡೆದ ಸೆನೆಗಲ್‌ ತಂಡದ ಆಟಗಾರರ ವರ್ತನೆಯನ್ನು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಖಂಡಿಸಿದ್ದಾರೆ. ಇದು ‘ಸ್ವೀಕಾರಾರ್ಹವಲ್ಲದ ಬೆಳವಣಿಗೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.