ADVERTISEMENT

ಅಮೆರಿಕ ದಿಟ್ಟ ಆಟ: ಇಂಗ್ಲೆಂಡ್‌ ಎದುರಿನ ಪಂದ್ಯ ಡ್ರಾ

ಏಜೆನ್ಸೀಸ್
Published 26 ನವೆಂಬರ್ 2022, 12:37 IST
Last Updated 26 ನವೆಂಬರ್ 2022, 12:37 IST
ಇಂಗ್ಲೆಂಡ್‌ನ ಜಾನ್ ಸ್ಟೋನ್ಸ್ (ಎಡ) ಮತ್ತು ಅಮೆರಿಕದ ಕ್ರಿಸ್ಟಿಯನ್‌ ಪುಲಿಸಿಚ್‌ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ನ ಜಾನ್ ಸ್ಟೋನ್ಸ್ (ಎಡ) ಮತ್ತು ಅಮೆರಿಕದ ಕ್ರಿಸ್ಟಿಯನ್‌ ಪುಲಿಸಿಚ್‌ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ   

ಅಲ್‌ ಖೊರ್‌, ಕತಾರ್‌: ವಿಶ್ವಕಪ್‌ ಟೂರ್ನಿಯಲ್ಲಿ ಅಮೆರಿಕ ತಂಡವನ್ನು ಸೋಲಿಸುವ ಇಂಗ್ಲೆಂಡ್ ತಂಡದ ಕನಸು ಇಲ್ಲಿಯೂ ಈಡೇರಲಿಲ್ಲ. ಅಲ್‌ ಬೈತ್‌ ಕ್ರೀಡಾಂಗಣದಲ್ಲಿ ದಿಟ್ಟ ಆಟವಾಡಿದ ಅಮೆರಿಕ ಗೋಲುರಹಿತ ಡ್ರಾ ಸಾಧಿಸಿತು.

ಶುಕ್ರವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಗೆದ್ದಿದ್ದರೆ ಸುಲಭವಾಗಿ 16ರ ಘಟ್ಟ ತಲುಪುತ್ತಿತ್ತು. ನ.29ರಂದು ನಡೆಯುವ ವೇಲ್ಸ್ ಎದುರಿನ ಬಿ ಗುಂಪಿನ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದರೆ ಹ್ಯಾರಿ ಕೇನ್‌ ನಾಯಕತ್ವದ ತಂಡ ನಾಕೌಟ್‌ ತಲು‍ಪಲಿದೆ.

ಸೋಮವಾರ ತನ್ನ ಮೊದಲ ಪಂದ್ಯದಲ್ಲಿ 6–2ರಿಂದ ಇರಾನ್ ತಂಡವನ್ನು ಪರಾಭವಗೊಳಿಸಿದ್ದ ಇಂಗ್ಲೆಂಡ್‌ ಭಾರಿ ಆತ್ಮವಿಶ್ವಾಸದಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಒಂದು ಬಾರಿ ಮಾತ್ರ ಚೆಂಡನ್ನು ಗುರಿಯ ಹತ್ತಿರಕ್ಕೆಸಾಗಿಸಲು ಆ ತಂಡಕ್ಕೆ ಸಾಧ್ಯವಾಯಿತು. ಮೊದಲಾರ್ಧದ ಅವಧಿಯಲ್ಲಿ ಚೆಂಡು ಹೆಚ್ಚು ಹೊತ್ತು ಅಮೆರಿಕ ಆಟಗಾರರ ಬಳಿಯಿತ್ತು.

ADVERTISEMENT

ಅಮೆರಿಕ ತಂಡವೂ ಎರಡ್ಮೂರು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಯಶಸ್ಸು ಸಾಧ್ಯವಾಗಲಿಲ್ಲ.

ಪಂದ್ಯದ 87ನೇ ನಿಮಿಷದಲ್ಲಿ ಇಂಗ್ಲೆಂಡ್‌ ಮಾರ್ಕಸ್‌ ರ‍್ಯಾಷ್‌ಫೋರ್ಡ್‌ಗೆ ಗೋಲು ಗಳಿಸುವ ಉತ್ತಮ ಅವಕಾಶವಿತ್ತು. ಆದರೆ ಎದುರಾಳಿ ಗೋಲ್‌ಕೀಪರ್ ಮ್ಯಾಟರ್‌ ಟರ್ನರ್‌ ತಡೆಗೋಡೆಯನ್ನು ದಾಟಲು ಸಾಧ್ಯವಾಗಲಿಲ್ಲ.

ಇಂಜುರಿ ಅವಧಿಯಲ್ಲಿ ಸಿಕ್ಕ ಫ್ರಿಕಿಕ್‌ನಲ್ಲೂ ಹ್ಯಾರಿ ಕೇನ್‌ ಅವರಿಗೆ ಯಶಸ್ಸು ಲಭಿಸಲಿಲ್ಲ.

ಉಭಯ ತಂಡಗಳು ವಿಶ್ವಕಪ್‌ ಟೂರ್ನಿಯಲ್ಲಿ ಈ ಹಿಂದೆ ಎರಡು ಬಾರಿ ಮುಖಾಮುಖಿಯಾಗಿದ್ದಾಗ ಅಮೆರಿಕ ಒಂದು ಬಾರಿ 1–0ರಿಂದ ಗೆದ್ದರೆ, ಮತ್ತೊಂದು ಬಾರಿ 1–1ರಿಂದ ಡ್ರಾ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.