ADVERTISEMENT

ಕೂಲಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಸುಭಾಶಿಶ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 15:15 IST
Last Updated 13 ಏಪ್ರಿಲ್ 2020, 15:15 IST

ಕೋಲ್ಕತ್ತ: ಭಾರತದ ಫುಟ್‌ಬಾಲ್‌ ಆಟಗಾರ ಶುಭಾಶಿಶ್‌ ಬೋಸ್‌ ಅವರು ಕೂಲಿ ಕಾರ್ಮಿಕರ ನೋವಿಗೆ ಮಿಡಿದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ನಿರಾಶ್ರಿತರು ಹಾಗೂ ನಿರುದ್ಯೋಗಿಗಳಿಗೆ ಅವರು ಅಕ್ಕಿ ಹಾಗೂ ಇತರೆ ದಿನಸಿ ಸಾಮಾಗ್ರಿಗಳನ್ನು ನೀಡಲು ನಿರ್ಧರಿಸಿದ್ದಾರೆ.

‘ಸ್ಥಳೀಯ ಫುಟ್‌ಬಾಲ್ ಪಂದ್ಯಗಳು ನಡೆಯುವಾಗ ರಿಕ್ಷಾ ಎಳೆಯುವವರು ಅನೇಕ ಬಾರಿ ನನಗೆ ಉಚಿತವಾಗಿ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾನು ಪಂದ್ಯಗಳಲ್ಲಿ ಚೆನ್ನಾಗಿ ಆಡಿದಾಗಲೆಲ್ಲಾ ಸುಭಾಶ್‌ಗ್ರಾಮದ ವ್ಯಾಪಾರಸ್ಥರು ಹಾಗೂ ಸ್ಥಳೀಯ ಅಂಗಡಿಯವರು ಉಚಿತವಾಗಿ ಆಹಾರದ‍ಪೊಟ್ಟಣಗಳನ್ನು ನೀಡಿ ಹಸಿವು ನೀಗಿಸಿದ್ದಾರೆ.ಈಗ ಅವರೆಲ್ಲಾ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಲು ಇದು ಸೂಕ್ತ ಸಮಯ. ಹೀಗಾಗಿ ಅಕ್ಕಿ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ನೀಡುತ್ತಿದ್ದೇನೆ. ಈ ಕೆಲಸ ಆತ್ಮತೃಪ್ತಿ ನೀಡುತ್ತಿದೆ’ ಎಂದು ಸುಭಾಶಿಶ್‌, ಸೋಮವಾರ ತಿಳಿಸಿದ್ದಾರೆ.

ADVERTISEMENT

‘ನಮಗಾಗಿ ವೈದ್ಯರು, ದಾದಿಯರು, ಪೊಲೀಸರು, ಪತ್ರಕರ್ತರು ಹಾಗೂ ಸ್ವಚ್ಛತಾ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಮನೆಯಲ್ಲೇ ಇದ್ದು ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಬೇಕು. ದೇಶ ಈಗ ಸಂಕಷ್ಟದಲ್ಲಿದೆ. ಹೀಗಾಗಿ ಎಲ್ಲರೂ ತಮ್ಮಿಂದಾದ ಸಹಾಯ ಮಾಡಬೇಕು’ ಎಂದು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.