ADVERTISEMENT

ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸದಲ್ಲಿ ಸುಬ್ರತ ಪಾಲ್

ಪಿಟಿಐ
Published 8 ಆಗಸ್ಟ್ 2020, 13:52 IST
Last Updated 8 ಆಗಸ್ಟ್ 2020, 13:52 IST
ಸುಬ್ರತ ಪಾಲ್
ಸುಬ್ರತ ಪಾಲ್   

ನವದೆಹಲಿ: ಮೂರು ವರ್ಷಗಳಿಂದ ಭಾರತ ಫುಟ್‌ಬಾಲ್ ತಂಡದಲ್ಲಿ ಆಡಲು ಅವಕಾಶ ಸಿಗದೇ ಇದ್ದ ‘ಸ್ಪೈಡರ್ ಮ್ಯಾನ್’ ಖ್ಯಾತಿಯ ಗೋಲ್‌ ಕೀಪರ್ ಸುಬ್ರತ ಪಾಲ್ ಅವರು 2023ರ ಏಷ್ಯಾ ಕಪ್‌ನಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್) ಚಾನಲ್ ಎಐಎಫ್‌ಎಫ್‌ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ‘ಭಾರತ ತಂಡಕ್ಕಾಗಿ ನಾನು ಇನ್ನೂ ಸಾಕಷ್ಟು ಕಾಣಿಕೆ ನೀಡಲು ಬಾಕಿ ಇದೆ. ಈ ಕುರಿತು ಕೋಚ್ ಐಗರ್ ಸ್ಟಿಮ್ಯಾಕ್ ಅವರಿಂದಲೂ ಭರವಸೆಯ ನುಡಿಗಳು ಬಂದಿದ್ದು ತಂಡಕ್ಕೆ ಮರಳುವುದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದೇನೆ’ ಎಂದು 33 ವರ್ಷದ ಪಾಲ್ ಹೇಳಿದರು.

2017ರಲ್ಲಿ ಸುಬ್ರತ ಪಾಲ್ ಕೊನೆಯದಾಗಿ ಭಾರತ ತಂಡದಲ್ಲಿ ಆಡಿದ್ದರು. ನಂತರ ಗುರುಪ್ರೀತ್ ಸಿಂಗ್ ಸಂಧು ಗೋಲ್ ಕೀಪಿಂಗ್ ಮಾಡುತ್ತಿದ್ದಾರೆ. ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಪರ ಆಡಿರುವ ಸುಬ್ರತ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. ಈಗ ಅವರು ಹೈದರಾಬಾದ್ ಎಫ್‌ಸಿ ಸೇರಿದ್ದಾರೆ.

ADVERTISEMENT

2022ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಭಾರತ ಈಗಾಗಲೇ ಕಳೆದುಕೊಂಡಿದೆ. ಆದರೆ ಮುಂದಿನ ಏಷ್ಯಾಕಪ್‌ಗೆ ಅರ್ಹತೆ ಪಡೆಯುವ ಭರವಸೆಯಲ್ಲಿದೆ. ಅಕ್ಟೋಬರ್ ಎಂಟರಂದು ಭುವನೇಶ್ವರದಲ್ಲಿ ಅರ್ಹತಾ ಟೂರ್ನಿಯ ಮೊದಲ ಪಂದ್ಯ ನಡೆಯಲಿದ್ದು ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಸುನಿಲ್ ಚೆಟ್ರಿ ಬಳಗ ಸೆಣಸಲಿದೆ. 2011ರಲ್ಲಿ ದೋಹಾದಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ತೋರಿದ ಅಮೋಘ ಸಾಮರ್ಥ್ಯವು ಸುಬ್ರತ ಪಾಲ್‌ಗೆ ಸ್ಪೈಡರ್‌ಮ್ಯಾನ್ ಬಿರುದು ಗಳಿಸಿಕೊಟ್ಟಿತ್ತು.

‘ಅದೃಷ್ಟವಶಾತ್ ಆರ್ಥಿಕವಾಗಿ ಸಮರ್ಥನಾಗಿದ್ದೇನೆ. ಕ್ಲಬ್ ಒಂದರ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದೇನೆ. ಹೀಗಿದ್ದೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಿದೆ. ಅದು ಬೇರೇನೂ ಅಲ್ಲ, ಭಾರತ ತಂಡದಲ್ಲಿ ಆಡುವ ಅವಕಾಶ. ತಂಡದಲ್ಲಿ ಸ್ಥಾನ ಗಳಿಸುವುದು ದೊಡ್ಡ ಸವಾಲೇ ಸರಿ. ಆದರೆ ಅದನ್ನು ಮೆಟ್ಟಿನಿಲ್ಲುವ ಭರವಸೆ ಇದೆ. ಕೋಚ್ ಬಗ್ಗೆ ನನಗೆ ಗೌರವ ಇದೆ. ನಾನು ಸಮರ್ಥ ಎಂದು ತೋರಿದರೆ ಅವರು ತಂಡಕ್ಕೆ ಕರೆಸಿಕೊಳ್ಳಲಿ. ಭಾರತಕ್ಕಾಗಿ 74 ಪಂದ್ಯಗಳನ್ನು ಆಡಿದ್ದೇನೆ ಎಂಬ ಅಹಂ ಇರಿಸಿಕೊಂಡು ನಾನು ಕೋರಿಕೆ ಇರಿಸುತ್ತಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ವಯಸ್ಸಿನಲ್ಲಿ ಏನೂ ಇಲ್ಲ. ಅದು ಕೇವಲ ಸಂಖ್ಯೆ. ಆಡಲು ಫಿಟ್ ಆಗಿದ್ದರೆ ಮತ್ತಿನ್ನೇನು ಬೇಕು’ ಎಂದು ಪ್ರಶ್ನಿಸಿದ ಸುಬ್ರತ ಅವರು ‘ಮುಂದಿನ ಏಷ್ಯಾಕಪ್‌ನಲ್ಲೂ ಆಡಲು ಅವಕಾಶ ನೀಡಿಲ್ಲ ಎಂದಾದರೆ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸುವುದೊಂದೇ ನನ್ನ ಮುಂದೆ ಇರುವ ದಾರಿ’ ಎಂದು ಹೇಳಿದರು.

‘ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ, ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೆಲವು ಕಾಲದ ವಿರಾಮದ ನಂತರ ತಂಡಕ್ಕೆ ವಾಪಸ್ ಆಗಲಿಲ್ಲವೇ. ವಾಪಸ್ ಬಂದು ಯಶಸ್ಸು ಸಾಧಿಸಲಿಲ್ಲವೇ’ ಎಂದು ಕೇಳಿದ ಸುಬ್ರತ ‘ಗಂಗೂಲಿ ನನಗೆ ಮಾದರಿ. ತಂಡದಿಂದ ಕೈಬಿಟ್ಟಾಗ ಅವರು ಗೊಂದಲಕ್ಕೆ ಒಳಗಾಗಿದ್ದರು. ಆದರೆ ನಂತರ ತಮ್ಮ ಸಾಮರ್ಥ್ಯ ತೋರಿಸಿದರು. ತಂಡಕ್ಕೆ ಮರಳಲು ಅವರು ಮಾಡಿದ ಕಠಿಣ ಶ್ರಮ ಎಲ್ಲರಿಗೂ ಗೊತ್ತಿರುವಂಥಾದ್ದೆ. ನನ್ನ ವ್ಯಕ್ತಿತ್ವವನ್ನು ಕೂಡ ಅನೇಕರು ಬಲ್ಲರು. ಆದ್ದರಿಂದ ಅವಕಾಶ ಸಿಗುವ ನಿರೀಕ್ಷೆ ಇದೆ’ ಎಂದರು.

ಕಾರ್ಯಕ್ರಮದಲ್ಲಿ ಸುಬ್ರತ ಅವರಿಗೆ ಸಂದೇಶವೊಂದನ್ನು ಕಳುಹಿಸಿದ ಆಸ್ಟ್ರೇಲಿಯಾದ ಖ್ಯಾತ ಫುಟ್‌ಬಾಲ್ ಆಟಗಾರ ಟಿಮ್ ಕಾಹಿಲ್ ‘ಜೆಮ್ಶೆಡ್‌ಪುರ ತಂಡದಲ್ಲಿ ಸುಬ್ರತ ಜೊತೆ ಆಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಆಟದಲ್ಲಿ ಅವರು ತೋರುವ ನಿಷ್ಠೆ ಮತ್ತು ವೃತ್ತಿಪರ ನಿಲುವು ನನಗೆ ತುಂಬ ಇಷ್ಟವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.