ADVERTISEMENT

ಜೆಮ್ಶೆಡ್‌ಪುರ ಎದುರಾಳಿ: ಎಟಿಕೆಎಂಬಿಗೆ ಅಗ್ರಸ್ಥಾನದ ಮೇಲೆ ಕಣ್ಣು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ನಾರ್ತ್ ಈಸ್ಟ್ ಯುನೈಟೆಡ್‌ಗೆ ಒಡಿಶಾ ಎಫ್‌ಸಿ ಎದುರಾಳಿ

ಪಿಟಿಐ
Published 13 ಫೆಬ್ರುವರಿ 2021, 13:57 IST
Last Updated 13 ಫೆಬ್ರುವರಿ 2021, 13:57 IST
ಎಟಿಕೆಎಂಬಿ ತಂಡ ತನ್ನ ರಕ್ಷಣಾ ವಿಭಾಗದ ಆಟಗಾರರ ಮೇಲೆ ಭರವಸೆ ಹೊಂದಿದೆ –ಐಎಸ್‌ಎಲ್ ಮೀಡಿಯಾ ಚಿತ್ರ
ಎಟಿಕೆಎಂಬಿ ತಂಡ ತನ್ನ ರಕ್ಷಣಾ ವಿಭಾಗದ ಆಟಗಾರರ ಮೇಲೆ ಭರವಸೆ ಹೊಂದಿದೆ –ಐಎಸ್‌ಎಲ್ ಮೀಡಿಯಾ ಚಿತ್ರ   

ಫತೋರ್ಡ, ‌ಗೋವಾ: ಅಮೋಘ ಆಟವಾಡುತ್ತ ಬಂದಿದ್ದರೂ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಮತ್ತೊಮ್ಮೆ ಮೊದಲ ಸ್ಥಾನಕ್ಕೇರುವ ಅವಕಾಶ ಒದಗಿದೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್‌ಸಿಯನ್ನು ಕೆಳಗಿಳಿಸುವ ಆ ತಂಡದ ಬಯಕೆ ಈಡೇರಬೇಕಾದರೆ ಭಾನುವಾರಜೆಮ್ಶೆಡ್‌ಪುರ ಎಫ್‌ಸಿ ಎದುರು ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಗೆಲುವು ಸಾಧಿಸಬೇಕಾಗಿದೆ.

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಎಟಿಕೆಎಂಬಿ ಈಗಾಗಲೇ ‍ಪ್ಲೇ ಆಫ್ ಹಂತಕ್ಕೇರಿದೆ. ಈ ವರೆಗೆ ತಂಡ ರಕ್ಷಣಾ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿದೆ. ಅತ್ತ ಜೆಮ್ಶೆಡ್‌ಪುರ ತಂಡ ಗೋಲು ಗಳಿಸಲು ಸತತ ವೈಫಲ್ಯ ಕಂಡಿದೆ. ಹಿಂದಿನ ಏಳು ಪಂದ್ಯಗಳಲ್ಲಿ ತಂಡ ನಾಲ್ಕು ಗೋಲುಗಳನ್ನು ಮಾತ್ರ ಗಳಿಸಿರುವುದು ಇದಕ್ಕೆ ನಿದರ್ಶನ. ತಂಡದ ಈ ದೌರ್ಬಲ್ಯದ ಲಾಭ ಪಡೆಯಲು ಎಟಿಕೆಎಂಬಿ ಪ್ರಯತ್ನಿಸಲಿದೆ. ಈ ಆವೃತ್ತಿಯ ಮೊದಲ ಲೆಗ್‌ನಲ್ಲಿ ಮುಖಾಮುಖಿಯಾದಾಗ ಜೆಮ್ಶೆಡ್‌ಪುರ ಜಯ ಗಳಿಸಿತ್ತು. ಹೀಗಾಗಿ ಪ್ರತೀಕಾರ ತೀರಿಸುವ ಉದ್ದೇಶವೂ ಎಟಿಕೆಎಂಬಿಗೆ ಇದೆ.

ರಾಯ್ ಕೃಷ್ಣ ಮತ್ತು ಮಾರ್ಸೆಲಿನೊ ಅವರು ಎಟಿಕೆಎಂಬಿಯ ಬಲವಾಗಿದ್ದು ಯಾವುದೇ ಹಂತದಲ್ಲಿ ಪಂದ್ಯಕ್ಕೆ ತಿರುವು ನೀಡುವ ಸಾಮರ್ಥ್ಯ ಅವರಿಗೆ ಇದೆ. ಹೀಗಾಗಿ ಆಕ್ರಮಣಕಾರಿ ಆಟ ಆಡಬೇಕಾದ ಅನಿವಾರ್ಯ ಸ್ಥಿತಿ ಜೆಮ್ಶೆಡ್‌ಪುರದ ಮುಂದೆ ಇದೆ.

ADVERTISEMENT

ಜಯದ ನಿರೀಕ್ಷೆಯಲ್ಲಿ ನಾರ್ತ್‌ ಈಸ್ಟ್‌

ತಿಲಕ್‌ ನಗರ ಮೈದಾನದಲ್ಲಿ ಸಂಜೆ ನಡೆಯಲಿರುವ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಮತ್ತು ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ. ಜೆರಾರ್ಡ್ ನೂಸ್ ಕೋಚ್ ಹುದ್ದೆ ತೊರೆದ ನಂತರ ನಾರ್ತ್‌ ಈಸ್ಟ್ ಯುನೈಟೆಡ್‌‌ನ ಪ್ಲೇ ಆಫ್ ಹಂತದ ಆಸೆ ಬಹುತೇಕ ಕಮರಿ ಹೋಗಿತ್ತು. ಆದರೆ ಖಲೀದ್ ಜಮೀಲ್ ಬಂದ ನಂತರ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗಿಸುತ್ತಿದ್ದಾರೆ. ಆರು ಪಂದ್ಯಗಳಲ್ಲಿ ಸೋಲರಿಯದೆ ಮುನ್ನುಗ್ಗಿರುವ ತಂಡ ಭಾನುವಾರ ಒಡಿಶಾವನ್ನು ಮಣಿಸಿದರೆ ಪ್ಲೇ ಆಫ್ ಹಂತಕ್ಕೇರಲಿದೆ.

16 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಜಯ ಗಳಿಸಿ ಟೂರ್ನಿಯಿಂದ ಹೊರಗೆ ಬಿದ್ದಿರುವ ಒಡಿಶಾ ಗೌರವ ಉಳಿಸಿಕೊಳ್ಳಲು ಭಾನುವಾರ ಪ್ರಯತ್ನಿಸಲಿದೆ. ಕೇರಳ ವಿರುದ್ಧ 2-2ರಲ್ಲಿ ಡ್ರಾ ಸಾಧಿಸಿದ ತಂಡ ಅದೇ ಲಯದಲ್ಲಿ ಆಡುವ ಭರವಸೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.