ADVERTISEMENT

ಜೊತಿನ್‌ ‘ಹ್ಯಾಟ್ರಿಕ್‌’: ಎಎಸ್‌ಸಿಗೆ ಜಯ

ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 20:35 IST
Last Updated 29 ಡಿಸೆಂಬರ್ 2018, 20:35 IST
ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಕವಿ ಅರಸನ್‌ (ಕೆಂಪು ಪೋಷಾಕು) ಸ್ಟೂಡೆಂಟ್ಸ್‌ ಯೂನಿಯನ್‌ ತಂಡದ ಪ್ರವೀಣ್‌ ಅವರನ್ನು ವಂಚಿಸಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಕ್ಷಣ –ಪ್ರಜಾವಾಣಿ ಚಿತ್ರ
ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಕವಿ ಅರಸನ್‌ (ಕೆಂಪು ಪೋಷಾಕು) ಸ್ಟೂಡೆಂಟ್ಸ್‌ ಯೂನಿಯನ್‌ ತಂಡದ ಪ್ರವೀಣ್‌ ಅವರನ್ನು ವಂಚಿಸಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಕ್ಷಣ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಜೊತಿನ್‌ ಸಿಂಗ್‌ ಅವರ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪೈಪೋಟಿಯಲ್ಲಿ ಎಎಸ್‌ಸಿ 3–1 ಗೋಲುಗಳಿಂದ ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡವನ್ನು ಪರಾಭವಗೊಳಿ‌ಸಿತು.

ಉಭಯ ತಂಡಗಳು ಆರಂಭದಿಂದಲೇ ವೇಗದ ಆಟಕ್ಕೆ ಮುಂದಾದವು. ಹೀಗಾಗಿ ಮೊದಲ 30 ನಿಮಿಷಗಳ ಆಟ ಗೋಲುರಹಿತವಾಗಿತ್ತು. ನಂತರ ಇಂಡಿಪೆಂಡೆಂಟ್ಸ್‌ ಮಿಂಚಿತು. ಈ ತಂಡ 40ನೇ ನಿಮಿಷದಲ್ಲಿ ಖಾತೆ ತೆರೆಯಿತು. ವಿ.ವಿಘ್ನೇಶ್‌ ಚೆಂಡನ್ನು ಗುರಿ ಮುಟ್ಟಿಸಿದರು.

ADVERTISEMENT

ದ್ವಿತೀಯಾರ್ಧದಲ್ಲಿ ಎಎಸ್‌ಸಿ ತಂಡ ಪ್ರಾಬಲ್ಯ ಮೆರೆಯಿತು. 45ನೇ ನಿಮಿಷದಲ್ಲಿ ಕಾಲ್ಚಳಕ ತೋರಿದ ಜೊತಿನ್‌ 1–1 ಸಮಬಲಕ್ಕೆ ಕಾರಣರಾದರು. 72ನೇ ನಿಮಿಷದಲ್ಲಿ ಅವರು ವೈಯಕ್ತಿಕ ಎರಡನೇ ಗೋಲು ದಾಖಲಿಸಿ 2–1 ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೇ (74ನೇ ನಿ.) ಮತ್ತೊಂದು ಗೋಲು ಬಾರಿಸಿ ‘ಹ್ಯಾಟ್ರಿಕ್‌’ ಪೂರೈಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ 2–1 ಗೋಲುಗಳಿಂದ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡದ ಎದುರು ಗೆದ್ದಿತು.

ವಿಜಯೀ ತಂಡದ ಆಶಿಕ್‌ ಮತ್ತು ಕವಿ ಅರಸನ್‌ ಕ್ರಮವಾಗಿ 48 ಮತ್ತು 85ನೇ ನಿಮಿಷಗಳಲ್ಲಿ ಗೋಲು ಹೊಡೆದರು.

ಸ್ಟೂಡೆಂಟ್ಸ್‌ ತಂಡದ ಇಮಾನುಯೆಲ್‌ 90+3ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.