ADVERTISEMENT

ನೆದರ್ಲೆಂಡ್ಸ್‌ಗೆ ಜಯದ ನಿರೀಕ್ಷೆ

ಮೊದಲ ಪಂದ್ಯದಲ್ಲಿ ಸೆನೆಗಲ್‌ ವಿರುದ್ಧ ಹೋರಾಟ

ರಾಯಿಟರ್ಸ್
Published 20 ನವೆಂಬರ್ 2022, 15:15 IST
Last Updated 20 ನವೆಂಬರ್ 2022, 15:15 IST
ನೆದರ್ಲೆಂಡ್ಸ್‌ ತಂಡದ ಡಿಫೆಂಡರ್‌ ವರ್ಜಿಲ್‌ ವಾನ್‌ ಡೈಕ್‌ – ಎಎಫ್‌ಪಿ ಚಿತ್ರ
ನೆದರ್ಲೆಂಡ್ಸ್‌ ತಂಡದ ಡಿಫೆಂಡರ್‌ ವರ್ಜಿಲ್‌ ವಾನ್‌ ಡೈಕ್‌ – ಎಎಫ್‌ಪಿ ಚಿತ್ರ   

ದೋಹಾ: ಕಳೆದ 15 ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿರುವ ನೆದರ್ಲೆಂಡ್ಸ್‌ ತಂಡ, ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಸೋಮವಾರ ಸೆನೆಗಲ್‌ ತಂಡದ ಸವಾಲು ಎದುರಿಸಲಿದೆ.

ನೆದರ್ಲೆಂಡ್ಸ್‌ ತಂಡ 2020ರ ಯೂರೊ ಕಪ್ ಟೂರ್ನಿಯಲ್ಲಿ ಜೆಕ್‌ ರಿಪಬ್ಲಿಕ್‌ ಎದುರು ಸೋತಿತ್ತು. ಆ ಬಳಿಕ ನಡೆದ ಯಾವುದೇ ಪಂದ್ಯವನ್ನೂ ಸೋತಿಲ್ಲ. ಅದೇ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್‌ ಟೂರ್ನಿಯಲ್ಲಿ ಅಭಿಯಾನ ಅರಂಭಿಸಲಿದೆ.

ವಿಶ್ವಕಪ್‌ನಲ್ಲಿ ಮೂರು ಸಲ ರನ್ನರ್ಸ್‌ ಅಪ್‌ ಆಗಿರುವ ‘ಡಚ್‌’ ತಂಡ ರಷ್ಯಾದಲ್ಲಿ 2018 ರಲ್ಲಿ ನಡೆದಿದ್ದ ಟೂರ್ನಿಗೆ ಅರ್ಹತೆ ಪಡೆದುಕೊಂಡಿರಲಿಲ್ಲ.

ADVERTISEMENT

‘ವಿಶ್ವದ ಶ್ರೇಷ್ಠ ಆಟಗಾರರು ನಮ್ಮ ತಂಡದಲ್ಲಿ ಇಲ್ಲದಿರುವುದು ನಿಜ. ಆದರೆ ವಿಶ್ವಕಪ್‌ಗೆ ನಡೆಸಿರುವ ಸಿದ್ಧತೆ, ನಾವು ಹೊಂದಿರುವ ಕೌಶಲ ಮತ್ತು ತಂತ್ರಗಾರಿಕೆಯನ್ನು ನೋಡುವಾಗ ಕಪ್‌ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ’ ಎಂದು ನೆದರ್ಲೆಂಡ್ಸ್‌ ತಂಡದ ಕೋಚ್ ಲೂಯಿಸ್‌ ವಾನ್‌ ಗಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಫ್ರಿಕಾ ಖಂಡದಿಂದ ಅರ್ಹತೆ ಪಡೆದಿರುವ ಮೂರು ತಂಡಗಳಲ್ಲಿ ಒಂದೆನಿಸಿರುವ ಸೆನೆಗಲ್‌, ಪ್ರಮುಖ ಆಟಗಾರರನ್ನು ಒಳಗೊಂಡಿದ್ದು ಅಚ್ಚರಿಯ ಫಲಿತಾಂಶವನ್ನು ಎದುರು ನೋಡುತ್ತಿದೆ. ಆದರೆ ಸ್ಟಾರ್‌ ಸ್ಟ್ರೈಕರ್‌ ಸ್ಯಾಡಿಯೊ ಮಾನೆ ಅವರು ಗಾಯದ ಕಾರಣ ವಿಶ್ವಕಪ್‌ನಲ್ಲಿ ಆಡದೇ ಇರುವುದು ಹಿನ್ನಡೆ ಉಂಟುಮಾಡಿದೆ. ಮಾನೆ ಅನುಪಸ್ಥಿತಿ ಇತರ ಆಟಗಾರರ ಮೇಲಿನ ಒತ್ತಡ ಹೆಚ್ಚಿಸಿದೆ.

ವಿಶ್ವಕಪ್‌ಗೆ ಪೂರ್ವಭಾವಿಯಾಗಿ ನಡೆದಿರುವ ಎಲ್ಲ ನಾಲ್ಕು ಅಭ್ಯಾಸ ಪಂದ್ಯಗಳಲ್ಲಿ ಗೆದ್ದಿರುವ ಸೆನೆಗಲ್‌, ಎದುರಾಳಿಗಳಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ. ಇವೆರಡು ತಂಡಗಳು ವಿಶ್ವಕಪ್‌ನಲ್ಲಿ ಪೈಪೋಟಿ ನಡೆಸುತ್ತಿರುವುದು ಇದೇ ಮೊದಲು.

ಅಮೆರಿಕಕ್ಕೆ ವೇಲ್ಸ್‌ ಸವಾಲು

ದೋಹಾ : ಸೋಮವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಅಮೆರಿಕ ಮತ್ತು ವೇಲ್ಸ್‌ ಎದುರಾಗಲಿದ್ದು, ಜಿದ್ದಾಜಿದ್ದಿನ ಸೆಣಸಾಟ ನಿರೀಕ್ಷಿಸಲಾಗಿದೆ.

ವೇಲ್ಸ್‌ ತಂಡ 64 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಆಡುತ್ತಿದೆ. 1958 ರಲ್ಲಿ ಕೊನೆಯ ಬಾರಿ ಆಡಿದ್ದಾಗ ಕ್ವಾರ್ಟರ್‌ ಫೈನಲ್‌ವರೆಗೆ ತಲುಪಿತ್ತು. ಅಮೆರಿಕ ಎಂಟು ವರ್ಷಗಳ ಬಿಡುವಿನ ಬಳಿಕ ವಿಶ್ವಕಪ್‌ಗೆ ಅವಕಾಶ ಪಡೆದಿದೆ.

ಉಭಯ ತಂಡಗಳು ಇದುವರೆಗೆ ಸ್ನೇಹಪರ ಪಂದ್ಯಗಳಲ್ಲಿ ಎರಡು ಸಲ ಎದುರಾಗಿವೆ. 2003 ರಲ್ಲಿ ಮೊದಲ ಬಾರಿ ಎದುರಾಗಿದ್ದಾಗ ಅಮೆರಿಕ 2–0 ರಲ್ಲಿ ಗೆದ್ದಿತ್ತು. 2020 ರಲ್ಲಿ ನಡೆದ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತ್ತು.

2014 ರಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಅಮೆರಿಕ ತಂಡ, ಬೆಲ್ಜಿಯಂ ಕೈಯಲ್ಲಿ 1–2 ರಲ್ಲಿ ಸೋತು ಹೊರಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.