ADVERTISEMENT

ಪ್ರೀಮಿಯರ್‌ ಲೀಗ್‌ ಫುಟ್‌ಬಾಲ್‌: ಚೆಲ್ಸಿಗೆ ಆಘಾತ ನೀಡಿದ ವೆಸ್ಟ್‌ ಹ್ಯಾಮ್‌

ಏಜೆನ್ಸೀಸ್
Published 2 ಜುಲೈ 2020, 8:40 IST
Last Updated 2 ಜುಲೈ 2020, 8:40 IST
ವೆಸ್ಟ್‌ ಹ್ಯಾಮ್‌ ತಂಡದ ಆ್ಯಂಡ್ರೆ ಯರ್ಮಲೆಂಕೊ (ಮಧ್ಯ) ಗೋಲು ಗಳಿಸಿದ ಬಳಿಕ ಸಹ ಆಟಗಾರರ ಜೊತೆ ಸಂಭ್ರಮಿಸಿದರು –ರಾಯಿಟರ್ಸ್‌ ಚಿತ್ರ 
ವೆಸ್ಟ್‌ ಹ್ಯಾಮ್‌ ತಂಡದ ಆ್ಯಂಡ್ರೆ ಯರ್ಮಲೆಂಕೊ (ಮಧ್ಯ) ಗೋಲು ಗಳಿಸಿದ ಬಳಿಕ ಸಹ ಆಟಗಾರರ ಜೊತೆ ಸಂಭ್ರಮಿಸಿದರು –ರಾಯಿಟರ್ಸ್‌ ಚಿತ್ರ    

ಲಂಡನ್‌: ನಿಗದಿತ ಅವಧಿಯ ಆಟ ಮುಗಿಯಲು ಒಂದು ನಿಮಿಷ ಬಾಕಿ ಇದ್ದಾಗ ಆ್ಯಂಡ್ರೆ ಯರ್ಮಲೆಂಕೊ ಕಾಲ್ಚಳಕ ತೋರಿದರು.

ನಿರ್ಣಾಯಕ ಘಟ್ಟದಲ್ಲಿ ಆ್ಯಂಡ್ರೆ ಗಳಿಸಿದ ಗೋಲಿನ ನೆರವಿನಿಂದ ವೆಸ್ಟ್‌ ಹ್ಯಾಮ್ ಯುನೈಟೆಡ್‌‌ ತಂಡವು ಪ್ರೀಮಿಯರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬಲಿಷ್ಠ ಚೆಲ್ಸಿ ಎಫ್‌ಸಿ ತಂಡಕ್ಕೆ ಆಘಾತ ನೀಡಿತು.

ಪಾಯಿಂಟ್ಸ್‌ ಪಟ್ಟಿಯಲ್ಲಿ 16ನೇ ಸ್ಥಾನದಲ್ಲಿರುವ ವೆಸ್ಟ್‌ ಹ್ಯಾಮ್‌ 3–2 ಗೋಲುಗಳಿಂದ ಗೆದ್ದಿತು. ಆ ಮೂಲಕ ಮೂರನೇ ಸ್ಥಾನಕ್ಕೇರುವ ಚೆಲ್ಸಿ ತಂಡದ ಕನಸಿಗೆ ತಣ್ಣೀರು ಸುರಿಯಿತು. 32 ಪಂದ್ಯಗಳಿಂದ 54 ಪಾಯಿಂಟ್ಸ್‌ ಕಲೆಹಾಕಿರುವ ಚೆಲ್ಸಿ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.

ADVERTISEMENT

ಲಂಡನ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳೂ ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಾಗಿ 40 ನಿಮಿಷಗಳ ಆಟ ಗೋಲು ರಹಿತವಾಗಿತ್ತು.

42ನೇ ನಿಮಿಷದಲ್ಲಿ ಚೆಲ್ಸಿ ತಂಡದ ವಿಲಿಯನ್‌ ಕಾಲ್ಚಳಕ ತೋರಿದರು. ಅವರು ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಈ ಖುಷಿ ಚೆಲ್ಸಿ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ವೆಸ್ಟ್‌ ಹ್ಯಾಮ್‌ ತಂಡದ ಥಾಮಸ್‌ ಸೌಕೆಕ್‌ ಅವಕಾಶ ನೀಡಲಿಲ್ಲ.ಹೆಚ್ಚುವರಿ ಅವಧಿಯಲ್ಲಿ (45+2) ಅವರು ಗೋಲು ಬಾರಿಸಿದರು. ಹೀಗಾಗಿ ಉಭಯ ತಂಡಗಳು 1–1 ಸಮಬಲದೊಂದಿಗೆ ವಿರಾಮಕ್ಕೆ ಹೋದವು.

ದ್ವಿತೀಯಾರ್ಧದ ಆರಂಭದಲ್ಲೇ ವೆಸ್ಟ್‌ ಹ್ಯಾಮ್‌ ಖಾತೆಗೆ ಮತ್ತೊಂದು ಗೋಲು ಸೇರ್ಪಡೆಯಾಯಿತು. 51ನೇ ನಿಮಿಷದಲ್ಲಿ ಮೈಕಲ್‌ ಆ್ಯಂಟೊನಿಯೊ ಚೆಂಡನ್ನು ಗುರಿ ಮುಟ್ಟಿಸಿದರು. 72ನೇ ನಿಮಿಷದಲ್ಲಿ ಚೆಲ್ಸಿ ತಂಡದ ವಿಲಿಯನ್‌ ಮತ್ತೊಮ್ಮೆ ಮೋಡಿ ಮಾಡಿದರು.

ನಿಗದಿತ ಅವಧಿಯ ಆಟ ಮುಗಿಯಲು ಎರಡು ನಿಮಿಷಗಳು ಬಾಕಿ ಇದ್ದಾಗ ಉಭಯ ತಂಡಗಳು2–2ರಿಂದ ಸಮಬಲ ಸಾಧಿಸಿದ್ದವು. 89ನೇ ನಿಮಿಷದಲ್ಲಿ ಗೋಲು ಬಾರಿಸಿದಯರ್ಮಲೆಂಕೊ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ಅವರು ಒದ್ದ ಚೆಂಡು ಎದುರಾಳಿ ತಂಡದ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ವೆಸ್ಟ್‌ ಹ್ಯಾಮ್‌ ಆಟಗಾರರು ಖುಷಿಯ ಕಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.