
ಫುಟ್‌ಬಾಲ್
ಕೋಲ್ಕತ್ತ: ಕೋಸ್ಟರಿಕಾ ಮಹಿಳಾ ತಂಡದ ಮಾಜಿ ವಿಶ್ವಕಪ್ ಕೋಚ್ ಅಮೇಲಿಯಾ ವಲ್ವೆರ್ಡೆ ಅವರು ಮುಂಬರುವ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ನಲ್ಲಿ ಆಡುವ ಭಾರತ ತಂಡಕ್ಕೆ ಮೆಂಟರ್ ಆಗಿ ಸೇರ್ಪಡೆಯಾಗಲಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಮೂಲಗಳು ತಿಳಿಸಿವೆ.
39 ವರ್ಷದ ಅಮೇಲಿಯಾ ಅವರ ಜೊತೆಗೆ ಒಪ್ಪಂದದ ಪ್ರಕ್ರಿಯೆ ಅಂತಿಮಗೊಳ್ಳುತ್ತಿದೆ. ಅವರು ಮುಂಬರುವ ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ವೇಳೆ ತಂಡ ಸೇರಿಕೊಳ್ಳಲಿದ್ದಾರೆ. ಅಮೇಲಿಯಾ ಅವರು 2015 ಮತ್ತು 2025ರ ಫಿಫಾ ಮಹಿಳಾ ವಿಶ್ವಕಪ್‌ನಲ್ಲಿ ಆಡಿದ್ದ ಕೋಸ್ಟರಿಕಾ ತಂಡಕ್ಕೆ ಮುಖ್ಯ ಕೋಚ್ ಆಗಿದ್ದರು.
ವಲ್ವೆರ್ಡೆ ಅವರು ತಮ್ಮ ಜೊತೆ ಗೋಲ್‌ಕೀಪಿಂಗ್ ಕೋಚ್ ಮತ್ತು ಸ್ಟ್ರೆಂಥ್ ಅಂಡ್ ಕಂಡಿಷನಿಂಗ್ ಕೋಚ್ ಅವರನ್ನೂ ಕರೆತರುವ ನಿರೀಕ್ಷೆಯಿದೆ. ಈ ಇಬ್ಬರು ಸಿಬ್ಬಂದಿ ಟರ್ಕಿಯಲ್ಲಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ. ಭಾರತ ತಂಡವು ಜನವರಿ 18 ರಿಂದ 24ರವರೆಗಿನ ಅವಧಿಯಲ್ಲಿ ಯುರೋಪಿನ ಕ್ಲಬ್‌ಗಳ ಜೊತೆ ಮೂರು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಈ ನೇಮಕಕ್ಕೆ ಎಐಎಫ್‌ಎಫ್ ಅಂಗೀಕಾರ ನೀಡಿದ್ದು, ತಂಡದ ಹೆಡ್ ಕೋಚ್ ಕ್ರಿಸ್ಪಿನ್ ಚೆಟ್ರಿ ಅವರ ಬೆಂಬಲ ಇದೆ. ತಂಡವು ಕ್ರಿಸ್ಪಿನ್ ಮಾರ್ಗದರ್ಶನದಲ್ಲಿ ಕಳೆದ ಜುಲೈನಲ್ಲಿ ಅಂತಿಮ ಸುತ್ತಿಗೆ ತಲುಪಿತ್ತು.
ಏಷ್ಯನ್ ಕಪ್‌ನಲ್ಲಿ ಅಗ್ರ ಆರು ಸ್ಥಾನ ಗಳಿಸುವ ತಂಡಗಳು, ಬ್ರೆಜಿಲ್‌ನಲ್ಲಿ ನಡೆಯಲಿರುವ 2027ರ ಮಹಿಳಾ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ. ಭಾರತ ಮಹಿಳಾ ತಂಡವು ವಿಶ್ವ ರ್‍ಯಾಂಕಿಂಗ್‌ನಲ್ಲಿ 67ನೇ ಸ್ಥಾನ ಪಡೆದಿದ್ದು, ತನ್ನ ಗುಂಪಿನಲ್ಲಿ ಕನಿಷ್ಠ ರ್‍ಯಾಂಕಿಂಗ್ ಪಡೆದ ತಂಡವಾಗಿದೆ. ಭಾರತ ಆಡುವ ಗುಂಪಿನಲ್ಲಿ ಜಪಾನ್, ತೈವಾನ್ ಮತ್ತು ವಿಯೆಟ್ನಾಂ ತಂಡಗಳಿವೆ.