ADVERTISEMENT

ಭಾರತಕ್ಕೆ ಮತ್ತೊಂದು ಭರ್ಜರಿ ಜಯ

ಎಫ್‌ಐಎಚ್‌ ಪ್ರೊ ಲೀಗ್ ಹಾಕಿ: ನಾಲ್ಕನೇ ಸ್ಥಾನಕ್ಕೆ ಮನ್‌ಪ್ರೀತ್ ಪಡೆ

ಪಿಟಿಐ
Published 12 ಏಪ್ರಿಲ್ 2021, 12:29 IST
Last Updated 12 ಏಪ್ರಿಲ್ 2021, 12:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬ್ಯೂನಸ್‌ ಐರಿಸ್‌: ಭರ್ಜರಿ ಆಟವಾಡಿದ ಭಾರತ ಹಾಕಿ ತಂಡವು ಎರಡನೇ ಪಂದ್ಯದಲ್ಲಿಯೂ ಅರ್ಜೆಂಟೀನಾ ತಂಡವನ್ನು ಮಣಿಸಿ ಎಫ್‌ಐಎಚ್ ಪ್ರೊ ಲೀಗ್‌ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಭಾನುವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಮನ್‌ಪ್ರೀತ್ ಸಿಂಗ್ ನಾಯಕತ್ವದ ಪಡೆ 3–0 ಗೋಲುಗಳಿಂದ ಒಲಿಂಪಿಕ್ಸ್ ಚಾಂಪಿಯನ್ ತಂಡಕ್ಕೆ ಸೋಲುಣಿಸಿತು.

ಹರ್ಮನ್‌ಪ್ರೀತ್ ಸಿಂಗ್‌ (11ನೇ ನಿಮಿಷ), ಲಲಿತ್ ಉಪಾಧ್ಯಾಯ (25ನೇ ನಿಮಿಷ) ಹಾಗೂ ಮನದೀಪ್ ಸಿಂಗ್ (58ನೇ ನಿಮಿಷ) ಭಾರತದ ಪರ ಕೈಚಳಕ ತೋರಿದರು. ಶನಿವಾರ ನಡೆದ ಪಂದ್ಯದಲ್ಲಿಯೂ ಪ್ರವಾಸಿ ಬಳಗ ಪಾರಮ್ಯ ಮೆರೆದಿತ್ತು. ಶೂಟೌಟ್‌ನಲ್ಲಿ ಗೆದ್ದು ಬೋನಸ್ ಪಾಯಿಂಟ್‌ ಗಳಿಸಿತ್ತು.

ಭಾನುವಾರದ ಗೆಲುವಿನೊಂದಿಗೆ ಭಾರತ ಒಟ್ಟು ಎಂಟು ಪಂದ್ಯಗಳಿಂದ 15 ಪಾಯಿಂಟ್ಸ್ ಕಲೆಹಾಕಿ ಎಫ್‌ಐಎಚ್ ಹಾಕಿ ಲೀಗ್ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಒಂದು ಪಾಯಿಂಟ್‌ ಅಂತರದಿಂದ ಅದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿದೆ.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ‘ಎ‘ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅರ್ಜೆಂಟೀನಾ ಹಾಗೂ ಆಸ್ಟ್ರೇಲಿಯಾ ತಂಡಗಳೊಂದಿಗೆ ಸೆಣಸಲಿದೆ. ಸ್ಪೇನ್, ನ್ಯೂಜಿಲೆಂಡ್ ಹಾಗೂ ಆತಿಥೇಯ ಜಪಾನ್‌ ಕೂಡ ಇದೇ ಗುಂಪಿನಲ್ಲಿವೆ. ಎಫ್‌ಐಎಚ್‌ ಲೀಗ್‌ನಲ್ಲಿ ಅರ್ಜೆಂಟೀನಾ ಸದ್ಯ ಆರನೇ ಸ್ಥಾನದಲ್ಲಿದೆ.

ಈ ಪಂದ್ಯವನ್ನು ಅರ್ಜೆಂಟೀನಾ ಉತ್ತಮವಾಗಿಯೇ ಆರಂಭಿಸಿತ್ತು. ಭಾರತದ ಗೋಲ್‌ಕೀಪರ್ ಕೃಷ್ಣಬಹಾದ್ದೂರ್ ಪಾಠಕ್, ಆ ತಂಡದ ಎರಡು ಗೋಲುಗಳನ್ನು ತಡೆಯದೇ ಇದ್ದಿದ್ದರೆ, ಖಂಡಿತ ಮುನ್ನಡೆಯಲ್ಲಿರುತ್ತಿತ್ತು.

ಆದರೆ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿಸಿದ ಹರ್ಮನ್‌ಪ್ರೀತ್, ಪ್ರವಾಸಿ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು.

ಎರಡನೇ ಕ್ವಾರ್ಟರ್‌ನಲ್ಲಿ ಲಲಿತ್ ಮಿಂಚಿದರು. ಭಾರತ ತಂಡಕ್ಕೆ ಎರಡನೇ ಗೋಲು ಗಳಿಸಿಕೊಟ್ಟರು. ಇದೇ ಲಯದಲ್ಲಿ ಮುಂದುವರಿದ ತಂಡವು ಪಂದ್ಯ ಮುಗಿಯಲು ಎರಡು ನಿಮಿಷಗಳಿರುವಾಗ ಮನದೀಪ್ ಸಿಂಗ್ ಮೂಲಕ ಮತ್ತೊಂದು ಯಶಸ್ಸು ಸಾಧಿಸಿತು.

ಮನ್‌ಪ್ರೀತ್ ಪಡೆಯು ಮೇ 8 ಹಾಗೂ 9ರಂದು ನಡೆಯಲಿರುವ ಎರಡು ಪಂದ್ಯಗಳ ಸರಣಿಗಾಗಿ ಭಾರತ ಗ್ರೇಟ್‌ ಬ್ರಿಟನ್‌ಗೆ ಪ್ರಯಾಣ ಬೆಳೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.