ADVERTISEMENT

ಚೆನ್ನೈ ಚಾಲೆಂಜರ್ಸ್‌ ಜಯಭೇರಿ

ಐಐಪಿ ಕಬಡ್ಡಿ ಲೀಗ್‌: ಸೆಮಿಗೆ ಬೆಂಗಳೂರು ರೈನೋಸ್

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:54 IST
Last Updated 29 ಮೇ 2019, 19:54 IST
ಮಂಗಳವಾರ ರಾತ್ರಿ ನಡೆದ ಪಾಂಡಿಚೇರಿ ಪ್ರಿಡೇಟರ್ಸ್‌ ಮತ್ತು ಚೆನ್ನೈ ಚಾಲೆಂಜರ್ಸ್‌ ತಂಡಗಳ ನಡುವಿನ ಪೈಪೋಟಿಯ ರೋಚಕ ಕ್ಷಣ –ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್‌
ಮಂಗಳವಾರ ರಾತ್ರಿ ನಡೆದ ಪಾಂಡಿಚೇರಿ ಪ್ರಿಡೇಟರ್ಸ್‌ ಮತ್ತು ಚೆನ್ನೈ ಚಾಲೆಂಜರ್ಸ್‌ ತಂಡಗಳ ನಡುವಿನ ಪೈಪೋಟಿಯ ರೋಚಕ ಕ್ಷಣ –ಪ್ರಜಾವಾಣಿ ಚಿತ್ರ: ಸವಿತಾ ಬಿ.ಆರ್‌   

ಮೈಸೂರು: ಚೆನ್ನೈ ಚಾಲೆಂಜರ್ಸ್‌ ತಂಡ ಬುಧವಾರ ರಾತ್ರಿ ನಡೆದ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ (ಐಐಪಿಕೆಎಲ್‌) ಟೂರ್ನಿಯ ಪಂದ್ಯದಲ್ಲಿ 50–42 ಪಾಯಿಂಟ್‌ಗಳಿಂದ ಪಾಂಡಿಚೇರಿ ಪ್ರಿಡೇಟರ್ಸ್‌ ವಿರುದ್ಧ ಜಯ ಸಾಧಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ಚೆನ್ನೈ 14–13 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಮರುಹೋರಾಟ ನಡೆಸಿದ ಪ್ರಿಡೇಟರ್ಸ್‌ ವಿರಾಮದ ವೇಳೆಗೆ 24–23 ರಲ್ಲಿ ಮೇಲುಗೈ ಪಡೆಯಿತು.

ಮತ್ತೆ ಲಯ ಸಾಧಿಸಿದ ಚೆನ್ನೈ ಮೂರನೇ ಕ್ವಾರ್ಟರ್‌ ಕೊನೆಗೊಂಡಾಗ 35–33 ರಲ್ಲಿ ಮುನ್ನಡೆ ಪಡೆದು ಕೊಂಡಿತು. ಅಂತಿಮ ಕ್ವಾರ್ಟರ್‌
ನಲ್ಲೂ ಚುರುಕಿನ ಆಟವಾಡಿ ಗೆಲುವು ಒಲಿಸಿಕೊಂಡಿತು.

ADVERTISEMENT

ಬೆಂಗಳೂರು ರೈನೋಸ್ ಸೆಮಿಗೆ: ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಜಯ ಸಾಧಿಸಿದ ಬೆಂಗಳೂರು ರೈನೋಸ್‌ ತಂಡ ಸೆಮಿಫೈನಲ್‌ ಪ್ರವೇಶಿಸಿತು.

ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ರೈನೋಸ್‌ 36–31 ರಲ್ಲಿ ಮುಂಬೈ ಚೆ ರಾಜೆ ತಂಡವನ್ನು ಮಣಿಸಿತು. ರೇಡಿಂಗ್‌ನಲ್ಲಿ 14 ಪಾಯಿಂಟ್‌ ತಂದಿತ್ತ ವಿಶಾಲ್‌ ಅವರು ರೈನೋಸ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಒಂಬತ್ತು ಪಂದ್ಯಗಳಿಂದ 11 ಪಾಯಿಂಟ್‌ ಕಲೆಹಾಕಿದ ಬೆಂಗಳೂರಿನ ತಂಡ ಪುಣೆ ಪ್ರೈಡ್ (14 ಪಾಯಿಂಟ್), ದಿಲೇರ್‌ ದಿಲ್ಲಿ (13 ಪಾಯಿಂಟ್) ಬಳಿಕ ಮೂರನೇ ತಂಡವಾಗಿ ಸೆಮಿಯಲ್ಲಿ ಸ್ಥಾನ ಪಡೆದುಕೊಂಡಿತು.

ರೈನೋಸ್‌ ಮೊದಲ ಕ್ವಾರ್ಟರ್‌ನಲ್ಲಿ 9–6ರ ಮೇಲುಗೈ ಸಾಧಿಸಿತು. ವಿರಾಮದ ವೇಳೆಗೆ 19–11 ರಲ್ಲಿ ಮುನ್ನಡೆಯಲ್ಲಿತ್ತು.

ಎರಡನೇ ಅವಧಿಯಲ್ಲೂ ಚುರುಕಿನ ಆಟ ಮುಂದುವರಿಸಿದ ರೈನೋಸ್ ಗೆದ್ದು ಪೂರ್ಣ ಪಾಯಿಂಟ್‌ ತನ್ನದಾಗಿಸಿ
ಕೊಂಡಿತು. ಅರ್ಮುಗಂ ರೇಡಿಂಗ್‌ನಲ್ಲಿ ಆರು ಪಾಯಿಂಟ್‌ ಗಳಿಸಿದರೆ, ಮನೋಜ್‌ ಟ್ಯಾಕ್ಲಿಂಗ್‌ನಲ್ಲಿ ಐದು ಪಾಯಿಂಟ್‌ ಗಳಿಸಿಕೊಟ್ಟರು.

ಬೆಂಗಳೂರು ಮಹಿಳೆಯರಿಗೆ ಜಯ: ಬುಧವಾರ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಬೆಂಗಳೂರು ತಂಡ 54–44 ರಲ್ಲಿ ಮೈಸೂರು ತಂಡವನ್ನು ಮಣಿಸಿತು.

ವಿರಾಮದ ವೇಳೆಗೆ ಬೆಂಗಳೂರು ತಂಡದವರು 28–15 ರಲ್ಲಿ ಮುನ್ನಡೆ ಸಾಧಿಸಿದ್ದರು.

ಜೂನ್‌ 1ರಿಂದ ಬೆಂಗಳೂರು ಲೆಗ್‌

ಟೂರ್ನಿಯ ಮೈಸೂರು ಲೆಗ್‌ನ ಪಂದ್ಯಗಳು ಬುಧವಾರ ಕೊನೆಗೊಂಡವು. ಬೆಂಗಳೂರು ಲೆಗ್‌ನ ಪಂದ್ಯಗಳು ಜೂನ್‌ 1 ರಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ. 3ರಂದು ಸೆಮಿಫೈನಲ್‌, 4ರಂದು ಫೈನಲ್‌ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.