ADVERTISEMENT

ಮಾಸ್ಕ್ ಧರಿಸಿ ಅಭ್ಯಾಸ ಮಾಡಿದ ಲಿಟನ್ ದಾಸ್

ರಾಜಧಾನಿಯಲ್ಲಿ ವಾಯುಮಾಲಿನ್ಯ;

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 20:06 IST
Last Updated 31 ಅಕ್ಟೋಬರ್ 2019, 20:06 IST
ಲಿಟನ್ ದಾಸ್
ಲಿಟನ್ ದಾಸ್   

ನವದೆಹಲಿ (ಪಿಟಿಐ): ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಗುರುವಾರ ಬಂದ ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರ ಲಿಟನ್ ದಾಸ್ ಮಾಸ್ಕ್ ಧರಿಸಿ ಫೀಲ್ಡಿಂಗ್‌ ಮಾಡಿದರು.

ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾಗಿರುವ ಹಿನ್ನೆಲೆಯಲ್ಲಿ ತಮ್ಮ ಮೇಲೆ ಯಾವುದೇ ದುಷ್ಪರಿಣಾಮ ಬೀರದಿರಲಿ ಎಂಬ ಮುನ್ನೆಚ್ಚರಿಕೆಯಿಂದ ಲಿಟನ್ ಮಾಸ್ಕ್ ಧರಿಸಿದ್ದರು. ಹತ್ತು ನಿಮಿಷಗಳವರೆಗೆ ಮಾತ್ರ ಅವರು ಇದನ್ನು ಬಳಸಿದರು. ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಮಾಸ್ಕ್ ಬಳಸಲಿಲ್ಲ. ಬಾಂಗ್ಲಾದ ಉಳಿದ ಯಾವುದೇ ಆಟಗಾರರು ಇದನ್ನು ಬಳಸಲಿಲ್ಲ.

ದೆಹಲಿಯ ಗಡಿಯಲ್ಲಿರುವ ಪಂಜಾಬ್‌ನ ಗ್ರಾಮಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡಲಾಗುತ್ತಿದೆ. ಅದರ ಹೊಗೆ ಮತ್ತು ದೀಪಾವಳಿಯಂದು ಸಿಡಿಸಿದ ಹೊಗೆಯು ದೆಹಲಿಯ ಮಂಜಿನಲ್ಲಿ ಸೇರಿಕೊಂಡು ‘ಹೊಂಜು’ ಉಲ್ಬಣಿಸಿದೆ. ಆದ್ದರಿಂದ ನವೆಂಬರ್‌ 3ರಂದು ಇಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾ ನಡುವಣ ಟ್ವೆಂಟಿ–20 ಪಂದ್ಯವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಕೆಲವು ಪರಿಸರವಾದಿ ಸಂಘಟನೆಗಳು ಸಲಹೆ ನೀಡಿದ್ದವು. ಮಾಜಿ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಕೂಡ ಇದೇ ಮಾತು ಹೇಳಿದ್ದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘ನಿಗದಿಯಾಗಿರುವಂತೆಯೇ ಪಂದ್ಯ ಇಲ್ಲಿ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ರೋಹಿತ್ ಶರ್ಮಾ, ‘ಇಲ್ಲಿಯವರೆಗೂ ನನಗೆ ಏನೂ ಸಮಸ್ಯೆಯಾಗಿಲ್ಲ. ನ.3ರಂದು ನಿಗದಿಯಂತೆ ಪಂದ್ಯ ನಡೆಯಲಿದೆ. ವಾಯುಮಾಲಿನ್ಯದ ಪರಿಣಾಮವು ಪಂದ್ಯದ ಮೇಲಾಗುವುದಿಲ್ಲವೆಂಬ ವಿಶ್ವಾಸವಿದೆ’ ಎಂದರು.

‘ಎರಡು ವರ್ಷಗಳ ಹಿಂದೆ ಇಲ್ಲಿ ಶ್ರೀಲಂಕಾ ಪಂದ್ಯ ನಡೆದಾಗಲೂ ಇದೇ ರೀತಿಯ ಸಮಸ್ಯೆಯಾಗಿತ್ತು. ಆದರೆ ನಮ್ಮ ಮೇಲೆ ಪರಿಣಾಮ ಬೀರಿರಲಿಲ್ಲ. ಇವತ್ತಷ್ಟೇ ನಾವು ಇಲ್ಲಿಗೆ ಬಂದಿದ್ದೇವೆ. ಈ ಕುರಿತು ಏನೇನು ಚರ್ಚೆಗಳು ನಡೆಯುತ್ತಿವೆ ತಿಳಿದಿಲ್ಲ’ ಎಂದು ರೋಹಿತ್ ಹೇಳಿದರು.

2017ರಲ್ಲಿ ಇಲ್ಲಿ ಟೆಸ್ಟ್ ಪಂದ್ಯ ನಡೆದಾಗ ಹೊಂಜಿನ ಸಮಸ್ಯೆಯಿಂದಾಗಿ ಶ್ರೀಲಂಕಾ ಆಟಗಾರರು ಮಾಸ್ಕ್‌ ಧರಿಸಿಕೊಂಡು ಆಟವಾಡಿದ್ದರು. ಸುಮಾರು 20 ನಿಮಿಷಗಳ ಕಾಲ ಆಟವೂ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.