ADVERTISEMENT

ಶಾಟ್‌ಗನ್‌: ಭಾರತೀಯರ ಫೈನಲ್‌ ಕನಸು ಭಗ್ನ

ಚೆನಾಯ್‌ಗೆ 15ನೇ ಸ್ಥಾನ, 33ನೇ ಸ್ಥಾನಕ್ಕೆ ತೃಪ್ತಿಪಟ್ಟ ಪೃಥ್ವಿರಾಜ್‌

​ಪ್ರಜಾವಾಣಿ ವಾರ್ತೆ
Published 16 ಮೇ 2019, 19:07 IST
Last Updated 16 ಮೇ 2019, 19:07 IST

ಚಾಂಗ್ವಾನ್‌ (ಪಿಟಿಐ): ಭಾರತದ ಕಿನನ್‌ ಚೆನಾಯ್‌ ಹಾಗೂ ಪೃಥ್ವಿರಾಜ್‌ ತೊಂಡೈಮನ್‌ ಅವರ ಶಾಟ್‌ಗನ್‌ ವಿಶ್ವಕಪ್‌ ಫೈನಲ್‌ ಕನಸು ಭಗ್ನಗೊಂಡಿತು. ಪುರುಷರ ಟ್ರ್ಯಾಪ್‌ ಶೂಟಿಂಗ್‌ನ ಅರ್ಹತಾ ಸುತ್ತಿನಲ್ಲಿ ಈ ಇಬ್ಬರು ಸ್ಪರ್ಧಿಗಳು ಕ್ರಮವಾಗಿ 15 ಹಾಗೂ 33ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮೊದಲ ದಿನ ನಡೆದ ಎರಡು ಸುತ್ತುಗಳಲ್ಲಿ ಈ ಜೋಡಿ ಅಗ್ರಸ್ಥಾನದಲ್ಲಿತ್ತು. ಆದರೆ ಅದೇ ಲಯ ಕಾಪಾಡಿಕೊಳ್ಳುವಲ್ಲಿ ಗುರುವಾರ ವಿಫಲವಾದರು.

ಚೆನಾಯ್‌ ಹಾಗೂ ಪೃಥ್ವಿರಾಜ್‌ ಅವರು ವೈಫಲ್ಯ ಕಾಣುವುದರೊಂದಿಗೆ ಭಾರತಕ್ಕೆ ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್‌ ಫೆಡರೇಷನ್‌ನ(ಐಎಸ್‌ಎಸ್‌ಎಫ್‌) ವಿಶ್ವಕಪ್‌ನ ಮತ್ತೊಂದು ಫೈನಲ್‌ ಹಂತ ತಪ್ಪಿದಂತಾಗಿದೆ.

ಫೈನಲ್‌ ತಲುಪಲು ಕಿನನ್‌ ಕನಿಷ್ಠ 122 ಅಂಕಗಳಿಸಬೇಕಾಗಿತ್ತು. ಅವರು ಮೂರು ಸುತ್ತುಗಳಲ್ಲಿ 24, 24 ಹಾಗೂ 22 ಅಂಕಗಳಿಗೆ ಗುರಿಯಿಟ್ಟು ಒಟ್ಟು ಐದು ಸುತ್ತುಗಳ ಸ್ಪರ್ಧೆಯಲ್ಲಿ 119 ಅಂಕ ಮಾತ್ರ ಗಳಿಸಿದರು. ಪೃಥ್ವಿರಾಜ್‌ ಅವರು 118 ಅಂಕಗಳಿಗೆ ತೃ‍ಪ್ತರಾದರು. ಭಾರತದ ಇನ್ನೋರ್ವ ಸ್ಪರ್ಧಿ ಜೋರಾವರ್‌ ಸಿಂಗ್‌ ಸಂಧು 116 ಅಂಕಗಳಿಗೆ ಗುರಿಯಿಟ್ಟು 64ನೇ ಸ್ಥಾನ ಪಡೆದರು.

ADVERTISEMENT

ಕಿನನ್‌ ಈ ಸಾಲಿನಲ್ಲಿ ನಡೆದ ಹಿಂದಿನ ಎರಡು ವಿಶ್ವಕಪ್‌ಗಳಲ್ಲಿ 10 ಮತ್ತು ಏಳನೇ ಸ್ಥಾನ ಪಡೆದಿದ್ದರು. ಸ್ಪರ್ಧಾರಹಿತ ಎಮ್‌ಕ್ಯೂಎಸ್‌(ಕನಿಷ್ಠ ಅರ್ಹತಾ ಸ್ಕೋರ್‌) ವಿಭಾಗದಲ್ಲಿದ್ದ ಭಾರತದ ಲಕ್ಷ್ಯ ಶೋರಾನ್‌ 116 ಅಂಕ ಗಳಿಸಿದರು.

ಪುರುಷರ ಟ್ರ್ಯಾಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಸೈಪ್ರಸ್‌ನ ಆ್ಯಂಡ್ರಿಯಾಸ್‌ ಮ್ಯಾಕ್ರಿ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.ಇಂಗ್ಲೆಂಡ್‌ನ ಮ್ಯಾಥ್ಯು ಜಾನ್‌ ಕೋವರ್ಡ್‌ ಹೊಲ್ಲಿ ಅವರು ಬೆಳ್ಳಿ ಪದಕ ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.