ADVERTISEMENT

ವಿಶ್ವ ಯುನಿವರ್ಸೇಡ್‌: ದ್ಯುತಿಗೆ ಚಿನ್ನದ ಗರಿ

ಐತಿಹಾಸಿಕ ಸಾಧನೆ ಮಾಡಿದ ಭಾರತದ ಮಹಿಳಾ ಅಥ್ಲೀಟ್‌

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:34 IST
Last Updated 10 ಜುಲೈ 2019, 19:34 IST
ದ್ಯುತಿ ಚಾಂದ್‌– ಎಎಫ್‌ಪಿ ಚಿತ್ರ
ದ್ಯುತಿ ಚಾಂದ್‌– ಎಎಫ್‌ಪಿ ಚಿತ್ರ   

ನವದೆಹಲಿ: ಭಾರತದ ಅಥ್ಲೀಟ್‌ ದ್ಯುತಿ ಚಾಂದ್‌ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ. ಇಟಲಿಯ ನೆಪೋಲಿಯಲ್ಲಿ ನಡೆದ ವಿಶ್ವ ಯುನಿವರ್ಸೇಡ್‌ ಕ್ರೀಡಾಕೂಟದಲ್ಲಿ ಮಂಗಳವಾರ 100 ಮೀಟರ್‌ ಓಟದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಟೂರ್ನಿಯ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್‌ ಎನಿಸಿಕೊಂಡರು.

ರೇಸ್‌ನಲ್ಲಿ ಮೊದಲಿನಿಂದಲೂ ಮುನ್ನಡೆ ಕಾಯ್ದುಕೊಂಡ ಅವರು, 11.32 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಸ್ವಿಟ್ಜರ್ಲೆಂಡ್‌ನ ಡೆಲ್‌ ಪೊಂಟ್‌ (11.33) ಎರಡನೇ ಸ್ಥಾನ ಪಡೆದರೆ, 11.39 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಜರ್ಮನಿಯ ಲೀಸಾ ಕ್ವಾಯೆ ಅವರಿಗೆ ಕಂಚಿನ ಪದಕ ದಕ್ಕಿತು.

ಸೆಮಿಫೈನಲ್‌ನಲ್ಲಿ 11.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದ್ಯುತಿ ಫೈನಲ್‌ಗೆ ಕಾಲಿಟ್ಟಿದ್ದರು.

ADVERTISEMENT

ರಾಷ್ಟ್ರೀಯ ದಾಖಲೆ (11.24 ಸೆಕೆಂಡ್‌)ಯೂಒಡಿಶಾದ ದ್ಯುತಿ ಹೆಸರಲ್ಲಿದೆ. ಜಾಗತಿಕ ಮಟ್ಟದ ಟೂರ್ನಿಯ 100 ಮೀಟರ್‌ ಓಟದಲ್ಲಿ ಚಿನ್ನ ಗೆದ್ದ ಪ್ರಥಮ ಭಾರತೀಯ ಅಥ್ಲೀಟ್‌ ಎಂಬ ದಾಖಲೆಯೂ ಅವರ ಪಾಲಾಗಿದೆ.

ವಿಶ್ವಮಟ್ಟದ ಟೂರ್ನಿಯಲ್ಲಿಹಿಮಾ ದಾಸ್‌ ಬಳಿಕ ಸ್ವರ್ಣ ಪದಕ ಪಡೆದ ಭಾರತದ ಎರಡನೇ ಅಥ್ಲೀಟ್‌ ದ್ಯುತಿ. ಹೋದ ವರ್ಷ ನಡೆದ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀ. ಓಟದಲ್ಲಿ ಹಿಮಾ ಅಗ್ರಸ್ಥಾನ ಪಡೆದಿದ್ದರು. ವಿಶ್ವ ಯುನಿವರ್ಸೇಡ್‌ ಟೂರ್ನಿಯ 2015ರ ಆವೃತ್ತಿಯಲ್ಲಿ ಭಾರತದ ಇಂದ್ರಜೀತ್‌ ಸಿಂಗ್‌ ಪುರುಷರ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದರು.

ದ್ಯುತಿ, ರೇಸ್‌ ವಿಜಯದ ಬಳಿಕ ಟ್ವೀಟ್‌ವೊಂದನ್ನು ಮಾಡಿದ್ದು, ‘ನಾನು ಕೆಳಗೆ ತಳ್ಳಿದಷ್ಟೂ ಬಲಿಷ್ಠವಾಗಿ ಪುಟಿದೆದ್ದು ಬರುತ್ತೇನೆ. ಹಲವು ವರ್ಷಗಳ ಕಠಿಣ ಪರಿಶ್ರಮ ಹಾಗೂ ನಿಮ್ಮ ಹಾರೈಕೆಯಿಂದ ಚಿನ್ನ ಗೆದ್ದು ದಾಖಲೆ ಸ್ಥಾಪಿಸಿದ್ದೇನೆ’ ಎಂದಿದ್ದಾರೆ.

2017ರಲ್ಲಿ ತೈಪೆಯನಲ್ಲಿ ನಡೆದ ಹೋದ ಆವೃತ್ತಿಯಲ್ಲಿ ದ್ಯುತಿ ಸೆಮಿಫೈನಲ್‌ ಕೂಡ ತಲುಪಿರಲಿಲ್ಲ. ಭಾರತದ ಸಂಜೀವನಿ ಜಾಧವ್‌ 10,000 ಮೀಟರ್‌ ಓಟದಲ್ಲಿ ಬೆಳ್ಳಿ ಗೆದ್ದಿದ್ದರು.

ದ್ಯುತಿ ಅವರು ಭುವನೇಶ್ವರದ ‘ಕಳಿಂಗ ಇನ್‌ಸ್ಟಿಟ್ಯೂಟ್ ಆಫ್‌ ಇಂಡಸ್ಟ್ರಿಯಲ್‌ ಟೆಕ್ನಾಲಜಿ’ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿದ್ದಾರೆ. ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ದ್ಯುತಿ ಅವರು ಇನ್ನಷ್ಟೇ ಅರ್ಹತೆ ಗಳಿಸಬೇಕಿದೆ.

ದ್ಯುತಿ ಅವರ ಸಾಧನೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರು ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ.

‘ವಿಶ್ವ ಯುನಿವರ್ಸೇಡ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ದ್ಯುತಿಗೆ ಶುಭಾಶಯ. ಇದು ದೇಶಕ್ಕೆ ಹೆಮ್ಮೆಯ ಕ್ಷಣ. ನಿಮ್ಮ ಪ್ರಯತ್ನವನ್ನು ಮುಂದುವರಿಸಿ, ಒಲಿಂಪಿಕ್‌ ಗೇಮ್ಸ್‌ನಲ್ಲೂ ಹೆಚ್ಚಿನ ಸಾಧನೆಯತ್ತ ಗಮನಹರಿಸಿ’ ಎಂದು ರಾಮನಾಥ್‌ ಕೋವಿಂದ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.