ADVERTISEMENT

ದೆಹಲಿ: ಬಾಕ್ಸಿಂಗ್ ಶಿಬಿರದಲ್ಲಿ ಭಾಗಿಯಾದ 21 ಮಂದಿಗೆ ಕೋವಿಡ್‌

ಪಿಟಿಐ
Published 14 ಏಪ್ರಿಲ್ 2021, 13:51 IST
Last Updated 14 ಏಪ್ರಿಲ್ 2021, 13:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತ ಮಹಿಳಾ ಬಾಕ್ಸಿಂಗ್ ತಂಡದ ಹೈ ಪರ್ಫಾರ್ಮನ್ಸ್ ನಿರ್ದೇಶಕ ರಫೇಲ್‌ ಬರ್ಗ್‌ಮಾಸ್ಕೊ ಮತ್ತು ಮುಖ್ಯ ಕೋಚ್ ಮೊಹಮ್ಮದ್ ಅಲಿ ಕಮರ್ ಸೇರಿದಂತೆ ಬಾಕ್ಸಿಂಗ್ ಶಿಬಿರದಲ್ಲಿ ಪಾಲ್ಗೊಂಡಿದ್ದ 21 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ.

ಇಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಮಹಿಳೆಯರ ಬಾಕ್ಸಿಂಗ್ ಶಿಬಿರ ನಡೆಯುತ್ತಿದ್ದು, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಬಾಕ್ಸರ್‌ಗಳು ಸೋಂಕಿತರಲ್ಲಿ ಸೇರಿಲ್ಲ. ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಈ ಕುರಿತು ಹೇಳಿಕೆ ನೀಡಿದ್ದು, ವಿಷಯವನ್ನು ಖಚಿತಪಡಿಸಿದೆ. ಆದರೆ ರಫೆಲ್ ಮತ್ತು ಮೊಹಮ್ಮದ್ ಅಲಿ ಅವರನ್ನು ಹೊರತುಪಡಿಸಿ ಸೋಂಕು ತಗಲಿರುವ ಯಾರ ಹೆಸರನ್ನೂ ಬಹಿರಂಗಪಡಿಸಲಾಗಿಲ್ಲ.

‘ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆಟಗಾರರು, ತರಬೇತಿ ಸಿಬ್ಬಂದಿ ಸೇರಿದಂತೆ 21 ಮಂದಿಯಲ್ಲಿ ಸೋಂಕು ಖಚಿತಪಟ್ಟಿದೆ‘ ಎಂದು ಸಾಯ್ ಹೇಳಿದೆ.

ADVERTISEMENT

‘ಕೊರೊನಾ ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ನಿಯಮಗಳ ಅನ್ವಯ ಅವರು ಕ್ವಾರಂಟೈನ್‌ಗೆ ತೆರಳಿದ್ದಾರೆ. ಸದ್ಯಕ್ಕೆ ತರಬೇತಿಯನ್ನು ಸ್ಥಗಿತಗೊಳಿಸಲಾಗಿದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.