ಬೆಂಗಳೂರು: ಅಜೇಯ ಓಟವನ್ನು ಮುಂದುವರಿಸಿದ ಕರ್ನಾಟಕದ ಬಾಲಕಿಯರು ಇಲ್ಲಿ ನಡೆಯುತ್ತಿರುವ 51ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನ ವಾಟರ್‌ಪೋಲೊ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದರು. ಆದರೆ, ರಾಜ್ಯದ ಬಾಲಕರ ತಂಡವು ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿತು.
ಬಸವನಗುಡಿ ಈಜು ಕೇಂದ್ರದಲ್ಲಿ ಕೂಟದ ನಾಲ್ಕನೇ ದಿನವಾದ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆತಿಥೇಯ ಬಾಲಕಿಯರ ತಂಡವು 21–12ರಿಂದ ಒಡಿಶಾ ತಂಡವನ್ನು ಮಣಿಸಿತು. ನಿತ್ಯಾ ಸಿ (6), ರೋಶಣಿ ಎಸ್. (5), ಮಾನ್ಯಾ ಆರ್ (4) ಮತ್ತು ಇಶಾನಿ ಕಿರಣ್ (4) ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಡಿಶಾ ತಂಡದ ಪರ ಕೃಷ್ಣ ಪ್ರಿಯ ನಾಯಕ್ 5 ಅಂಕ ಮತ್ತು ಪೂಜಾ ಪ್ರಧಾನ್ 4 ಅಂಕ ಕಲೆಹಾಕಿದರು.
ರಾಜ್ಯದ ಬಾಲಕಿಯರ ತಂಡವು ಇದಕ್ಕೂ ಮುನ್ನ 7–6ರಿಂದ ಮಹಾರಾಷ್ಟ್ರ ವಿರುದ್ಧ; 8–1ರಿಂದ ತಮಿಳುನಾಡು ವಿರುದ್ಧ; 9–0ರಿಂದ ಅಸ್ಸಾಂ ವಿರುದ್ಧ ಗೆಲುವು ಸಾಧಿಸಿತ್ತು. ಶುಕ್ರವಾರ ನಡೆಯುವ ಫೈನಲ್‌ನಲ್ಲಿ ಕೇರಳ ವಿರುದ್ಧ ಸೆಣಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಕೇರಳ ತಂಡವು 14–4ರಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು.
ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಕರ್ನಾಟಕದ ಬಾಲಕರ ತಂಡವು ಸೆಮಿಫೈನಲ್‌ನ ರೋಚಕ ಹಣಾಹಣಿಯಲ್ಲಿ 13–15ರಿಂದ ಬಂಗಾಳ ತಂಡಕ್ಕೆ ಮಣಿಯಿತು. ರಾಜ್ಯ ತಂಡದ ಪರ ಸಕೇತ್ ಚಂದ್ರ 3 ಅಂಕ, ಪ್ರವೀಣ್ ಮೋಹನ್, ಜಯಂತ್ ಎಲ್. ರೆಡ್ಡಿ, ಸೂರ್ಯ ಚಂದ್ರ, ಸೂರ್ಯ ಮೊಸಳೆ ಸುಧೀರ್ ತಲಾ 2 ಅಂಕ ಗಳಿಸಿದರು. ಸಂಜೀಬ್ ಸರ್ದಾರ್ (5) ಮತ್ತು ಜಾಯ್ ಮಂಡಲ್ (3) ಬಂಗಾಳ ಗೆಲುವಿನಲ್ಲಿ ಮಿಂಚಿದರು.
ಶುಕ್ರವಾರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಬಂಗಾಳ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರ 18–16ರಿಂದ ಕೇರಳ ತಂಡವನ್ನು ಮಣಿಸಿತು. ಕಂಚಿನ ಪದಕದ ಸ್ಪರ್ಧೆಗಾಗಿ ಕರ್ನಾಟಕ ಮತ್ತು ಕೇರಳ ತಂಡಗಳು ಸೆಣಸಲಿವೆ.
ಮಹಾರಾಷ್ಟ್ರ ಮಿಂಚು: ಕೆನ್ಸಿಂಗ್ಟನ್ ಈಜುಕೊಳದಲ್ಲಿ ನಡೆಯುತ್ತಿರುವ ಡೈವಿಂಗ್ ಸ್ಪರ್ಧೆಯಲ್ಲಿ ಗುರುವಾರ ಮಹಾರಾಷ್ಟ್ರದ ಈಜುಪಟುಗಳು ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿ, ಪಾರಮ್ಯ ಮುಂದುವರಿಸಿದರು. ಒಂದು ಚಿನ್ನ ಮಣಿಪುರದ ಪಾಲಾಯಿತು.
ಫಲಿತಾಂಶ: ಬಾಲಕರು: ಜಿ–1 1ಎಂಟಿ ಎಸ್‌ಬಿ: ಸ್ವರಾಜ್ ರಾಜೇಂದ್ರ ಲಾಡ್ (ಮಹಾರಾಷ್ಟ್ರ, 381.15 ಅಂಕ)–1, ಸೌಮಿಕ್ ಪೊಲ್ಲಿ (ಎಸ್‌ಎಸ್‌ಸಿಬಿ)–2, ಅರಿತ್ರಾ ಕೋಲಿ (ಎಸ್‌ಎಸ್‌ಸಿಬಿ)–3.
ಜಿ–3 3ಎಂಟಿ ಎಸ್‌ಬಿ: ಅರುಬಮ್ ಬೆನ್ಹರ್ (ಮಣಿಪುರ, 246.15 ಅಂಕ)–1, ಹಿರೋಮ್ ಬೋನ್ಸನ್ ಸಿಂಗ್ (ಮಣಿಪುರ)–2, ಇಂದ್ರನಿಲ್ ದಿಗ್ವಿಜಯ್ ಪಾಟೀಲ (ಮಹಾರಾಷ್ಟ್ರ)–3.
ಬಾಲಕಿಯರು: ಹಿ–1 3ಎಂಟಿ ಎಸ್‌ಬಿ: ಶ್ರಾವಣಿ ಪ್ರತಾಪ್ ಸೂರ್ಯವಂಶಿ (ಮಹಾರಾಷ್ಟ್ರ, 313.30 ಅಂಕ)–1, ಅನ್ನೇಶಾ ಧಾರಾ (ಬಂಗಾಳ)–2, ಕೆಯಾ ಹೆರಾಂಬ್ ಪ್ರಭು (ಮಹಾರಾಷ್ಟ್ರ)–3.
ಜಿ 3 1ಎಂಟಿ ಎಸ್‌ಬಿ: ಮಾನಸ್ವಿ ರಾಜಶೇಖರ್ ಮಾನೆ (ಮಹಾರಾಷ್ಟ್ರ, 188.15 ಅಂಕ)–1, ಉರ್ಜಿತಾ ದಾಸ್ (ಬಂಗಾಳ)–2, ನಿಶಿತಾ ರಾಜ್ ಠಾಕೂರ್ (ಮಹಾರಾಷ್ಟ್ರ)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.