ADVERTISEMENT

ಅಮೃತ ಕ್ರೀಡಾ ದತ್ತು: 75 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 17:03 IST
Last Updated 23 ಅಕ್ಟೋಬರ್ 2021, 17:03 IST
   

ಬೆಂಗಳೂರು: ಪ್ಯಾರಿಸ್‌ ಒಲಂಪಿಕ್ಸ್‌ಗೆ ರಾಜ್ಯದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಲು ‘ಅಮೃತ ಕ್ರೀಡಾ ದತ್ತು ಯೋಜನೆ’ ಅಡಿಯಲ್ಲಿ ತರಬೇತಿ ನೀಡುವುದಕ್ಕಾಗಿ ಗಾಲ್ಫ್‌ ಪಟು ಅದಿತಿ ಅಶೋಕ್‌, ಈಕ್ವೇಸ್ಟ್ರಿಯನ್‌ ಪಟು ಫೌದಾ ಮಿರ್ಝಾ, ಈಜು ಪಟು ಶ್ರೀಹರಿ ನಟರಾಜ್‌ ಸೇರಿದಂತೆ 75 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಪ್ಯಾರಾ ಪವರ್‌ ಲಿಫ್ಟರ್‌ ಶಾಕೀನಾ ಖಟೂನ್‌, ಬ್ಯಾಡ್ಮಿಂಟನ್‌ ಪಟು ಅಶ್ವಿನಿ ಪೊನ್ನಪ್ಪ, ಅಥ್ಲೀಟ್‌ ಎಂ.ಆರ್‌. ಪೂವಮ್ಮ, ಪ್ಯಾರಾ ಈಜು ಪಟು ನಿರಂಜನ್‌ ಎಂ. ಹಾಕಿ ಆಟಗಾರ ಸುನೀಲ್‌ ಕೂಡ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಆರು ಮಂದಿ ಅಂಗವಿಕಲ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದೆ. 20 ಕ್ರೀಡಾಪಟುಗಳ ಕಾಯ್ದಿರಿಸಿದ ಪಟ್ಟಿಯನ್ನೂ ಪ್ರಕಟಿಸಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಅಮೃತ ಕ್ರೀಡಾ ದತ್ತು ಯೋಜನೆ’ ಜಾರಿಗೊಳಿಸಲಾಗಿದೆ. ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಕೆ.ಸಿ. ನಾರಾಯಣ ಗೌಡ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್‌ 28ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ತರಬೇತಿಗಾಗಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು. ಶುಕ್ರವಾರ ಈ ಸಂಬಂಧ ಆದೇಶ ಹೊರಡಿಸಲಾಗಿದೆ.

ADVERTISEMENT

ಒಬ್ಬ ಗಾಲ್ಫ್‌ ಪಟು, ಐವರು ಈಜು ಪಟುಗಳು, 12 ಮಂದಿ ಅಥ್ಲೀಟ್‌ಗಳು, ಎಂಟು ಮಂದಿ ಸೈಕ್ಲಿಸ್ಟ್‌ಗಳು, ಏಳು ಮಂದಿ ಬ್ಯಾಸ್ಕೆಟ್‌ ಬಾಲ್‌ ಪಟುಗಳು, ನಾಲ್ವರು ಕುಸ್ತಿ ‍ಪಟುಗಳು, ಒಂಬತ್ತು ಮಂದಿ ಬ್ಯಾಡ್ಮಿಂಟನ್‌ ಪಟುಗಳು, ಐವರು ಹಾಕಿ ಪಟುಗಳು ಪಟ್ಟಿಯಲ್ಲಿದ್ದಾರೆ.

‘ತರಬೇತಿಗೆ ಆಯ್ಕೆಯಾದವರಿಗೆ ವಾರ್ಷಿಕ ₹ 5 ಲಕ್ಷ ನೆರವು ನೀಡಲಾಗುವುದು. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಖಾಸಗಿ ಕಂಪನಿಗಳಿಂದ ನೆರವು ದೊರಕಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. 150 ಕಂಪನಿಗಳಿಗೆ ಪತ್ರ ಬರೆದಿದ್ದು, 50 ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ’ ಎಂದು ನಾರಾಯಣ ಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.