ADVERTISEMENT

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್: ಅನೀಶ್‌, ಧೀನಿಧಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 16:12 IST
Last Updated 9 ಸೆಪ್ಟೆಂಬರ್ 2022, 16:12 IST
ಧೀನಿಧಿ ದೇಸಿಂಗು
ಧೀನಿಧಿ ದೇಸಿಂಗು   

ಗುವಾಹಟಿ: ಕರ್ನಾಟಕದ ಅನೀಶ್‌ ಎಸ್‌.ಗೌಡ ಮತ್ತು ಧೀನಿಧಿ ದೇಸಿಂಗು ಅವರು 75ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಚಿನ್ನ ಜಯಿಸಿದರು.

ಡಾ.ಜಾಕೀರ್‌ ಹುಸೇನ್‌ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಕೂಟದ ಪುರುಷರ 800 ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ ಅನೀಶ್‌ 8 ನಿ. 23.17ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಉತ್ತರ ಪ್ರದೇಶದ ಅನುರಾಗ್‌ ಆರ್‌ ಸಿಂಗ್‌ ಬೆಳ್ಳಿ ಹಾಗೂ ಆರ್‌ಎಸ್‌ಪಿಬಿಯ ಸುಶ್ರೂತ್‌ ಸೂರ್ಯಕಾಂತ್‌ ಅವರು ಕಂಚು ಗೆದ್ದುಕೊಂಡರು.

ಮಹಿಳೆಯರ 200 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಧೀನಿಧಿ 2 ನಿ. 9.29 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದುಕೊಂಡರು. ಅಸ್ಸಾಂನ ಶಿವಾಂಗಿ ಶರ್ಮ ಎರಡನೇ ಹಾಗೂ ಕರ್ನಾಟಕದ ಎಸ್‌.ರುಜುಲಾ (2:10.52 ಸೆ.) ಅವರು ಮೂರನೇ ಸ್ಥಾನ ಗಳಿಸಿದರು.

ADVERTISEMENT

ಮಹಿಳೆಯರ 4X200 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕರ್ನಾಟಕ ಚಿನ್ನ ಜಯಿಸಿತು. ತನಿಷಿ ಗುಪ್ತಾ, ಎಸ್‌.ರುಜುಲಾ, ಅದಿತಿ ಮತ್ತು ಧೀನಿಧಿ ಅವರನ್ನೊಳಗೊಂಡ ತಂಡ 8 ನಿ. 59.70 ಸೆ.ಗಳಲ್ಲಿ ಗುರಿ ತಲುಪಿತು. ಮಹಾರಾಷ್ಟ್ರ ಮತ್ತು ತಮಿಳುನಾಡು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿದವು.

ತನಿಷಿ ಗುಪ್ತಾ ಮಹಿಳೆಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ (1 ನಿ. 3.66 ಸೆ.) ಎರಡನೇ ಸ್ಥಾನ ಪಡೆದರು. ಅಸ್ಸಾಂನ ಆಸ್ತಾ ಚೌಧರಿ (1 ನಿ. 3.07 ಸೆ.) ಅವರು ಈ ವಿಭಾಗದಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಪುರುಷರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಆರ್‌.ಸಂಭವ್‌, ಕರ್ನಾಟಕಕ್ಕೆ ಕಂಚಿನ ಪದಕ ತಂದುಕೊಟ್ಟರು. ಅವರು 55.69 ಸೆ.ಗಳಲ್ಲಿ ಗುರಿ ತಲುಪಿದರು. ಈ ಸ್ಪರ್ಧೆಯಲ್ಲಿ ಹರಿಯಾಣದ ಹರ್ಷ ಮತ್ತು ಅಸ್ಸಾಂನ ಬಿಕ್ರಮ್‌ ಚಾಂಗ್‌ಮಯ್‌ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡರು.

ಶನಿವಾರ ಕೊನೆಯ ದಿನವಾಗಿದ್ದು, ಕರ್ನಾಟಕ ತಂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಲ್ಲಿದೆ. ರಾಜ್ಯದ ಈಜುಪಟುಗಳು 12 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.